ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಟುಂಬ ಮತ್ತು ಸಮಾಜ ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವದಿಂದ ಕಾಣಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಬೆಂಗಳೂರು ಹಾಗೂ ರಕ್ಷ ಸಮುದಾಯ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಿ.ಆರ್.ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ದಿನದ ಕಾರ್ಯಾಗಾರ ಹಾಗೂ ಸ್ವೀಪ್-ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಟುಂಬ ಅಂತಹ ವ್ಯಕ್ತಿಯನ್ನು ಗೌರವ, ಪ್ರೀತಿಯಿಂದ ಕಾಣಬೇಕು. ಹಾಗೆ ಕಂಡಿದ್ದರೆ ಈ ರೀತಿ ತಮ್ಮ ಹಕ್ಕಿಗಾಗಿ ಹೋರಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಕುಟುಂಬ ಮತ್ತು ಸಮಾಜ ಗೌರವದಿಂದ ಕಂಡು ಸ್ವೀಕರಿಸುತನಕ ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಇದೆ. ಸಂವಿಧಾನ ನಮ್ಮೆಲ್ಲರಿಗೂ ಸಮಾನತೆ ನೀಡಿದೆ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು. ಸಂವಿಧಾನದ 21 ವಿಧಿ ನಮ್ಮೆಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಹಕ್ಕು ಮತ್ತು ಬಾಧ್ಯತೆಗಳನ್ನು ಅರ್ಥೈಸಿಕೊಂಡು ನಾವೆಲ್ಲರೂ ಒಂದು ಎಂಬ ಒಗ್ಗಟ್ಟಿನಿಂದ ಬದುಕಬೇಕು ಎಂದು ಹೇಳಿದರು.

ಗುರುತಿಸುವಿಕೆ ಬಹಳ ಪ್ರಮುಖವಾಗುತ್ತದೆ. ನಮ್ಮಲ್ಲಿ ಅನೇಕ ವಿಧಗಳ ಜನರಿದ್ದಾರೆ. ಅವರ ಸರ್ವೇ ಆಗಿಲ್ಲ. ಗುರುತಿಸುವಿಕೆಯ ಆಧಾರದ ಮೇಲೆ ನಮಗೆ ಆಧಾರ್, ಇತರೆ ಗುರುತಿನ ಚೀಟಿಗಳು ಲಭ್ಯವಾಗುತ್ತಿಲ್ಲ. ಹಲವರು ಗಂಡು, ಹೆಣ್ಣು ಮತ್ತು ಕೆಲವರು ಟ್ರಾನ್ಸ್‍ಜೆಂಡರ್ ಎಂದು ಗುರುತಿಸಿಕೊಳ್ಳುತ್ತಾರೆ.

Also read: ಮೀಸಲಾತಿ ನಿರ್ಣಯ ಸ್ವಾಗತಿಸಿ, ಪ್ರತಿಭಟನೆ ಕೈಬಿಡಿ: ಶಾಸಕ ಅಶೋಕ ನಾಯ್ಕ ಮನವಿ
ನಮ್ಮ ಬಗ್ಗೆ ಸಮಾಜದಲ್ಲಿ ಯಾವ ರೀತಿಯಲ್ಲೂ ಅರಿವು ಮೂಡಿಸಲಾಗಿಲ್ಲ. ಪಠ್ಯ ಇತರೆ ಎಲ್ಲೂ ನಮ್ಮ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮಗೇ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಲಿಲ್ಲ. 1999 ರಲ್ಲಿ ಎನ್‍ಜಿಓ ಮೂಲಕ ಮಾನವ ಹಕ್ಕುಗಳ ಬಗ್ಗೆ ತಿಳಿದು, ನಾವೂ ಮನುಷ್ಯರು, ನಮಗೂ ಧ್ವನಿ ಇದೆ ಎಂದು ತಿಳಿಯಲಾರಂಭಿಸಿದೆವು.
ಹೆಚ್‍ಐವಿ ಕಾರ್ಯಕ್ರಮದ ಪ್ರಕಾರ ರಾಜ್ಯದಲ್ಲಿ 36 ಸಾವಿರ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆಂಬ ಮಾಹಿತಿ ಇದೆ. ಇದು ಕೂಡ ನಿಖರ ಮಾಹಿತಿ ಅಲ್ಲ. ನಮ್ಮ ಬಗ್ಗೆ ಸರ್ವೇ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕಿದ್ದರ ಫಲವಾಗಿ ಮೊದಲ ಹಂತದಲ್ಲಿ ಪೈಲಟ್ ಪ್ರೋಗ್ರಾಂ ಆಗಿ ಮೈಸೂರು ಮತ್ತು ಬಿಜಾಪುರದಲ್ಲಿ ಸರ್ವೇ ಶುರು ಆಗಿದ್ದು ರೂ.75 ಲಕ್ಷ ಬಿಡುಗಡೆ ಆಗಿದೆ.

ನಮ್ಮ ಸಮುದಾಯವನ್ನು ಒಳಗಿನಿಂದ ನೋಡಿದಾಗ ನಮ್ಮ ನಿಜವಾದ ತುಮುಲ, ನೋವು ಅರ್ಥ ಆಗಲು ಸಾದ್ಯವಾಗುತ್ತದೆ. ನಮ್ಮಲ್ಲೂ ಸಾಧಕರಿದ್ದಾರೆ. ಆದರೆ ಸಂಖ್ಯೆ ಕಡಿಮೆ. ಅದಕ್ಕೆ ಕಾರಣ ವಿದ್ಯಾಭ್ಯಾಸದ ಕೊರತೆ. ತಂದೆ-ತಾಯಿ, ಸಮಾಜ ನಮ್ಮನ್ನು ಒಪ್ಪಿಕೊಂಡರೆ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯ. ಶಿಕ್ಷಣದಿಂದ ಸಾಧನೆ ಸಾಧ್ಯವಾಗುತ್ತದೆ. ಆಗ ನಮ್ಮಲ್ಲೂ ಡಿಸಿ, ಎಸ್‍ಪಿ, ಇತರೆ ಉನ್ನತ ಅಧಿಕಾರಿಗಳನ್ನು ಕಾಣಬಹುದು.
ಚಾಂದನಿ, ಪಯಣ ಸಂಸ್ಥೆ ನಿರ್ದೇಶಕಿ, ಬೆಂಗಳೂರು
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಯಾರಾದರೂ ಒತ್ತಡ ಹೇರಿ, ಬೆದರಿಕೆ ಹಾಕಿ ನೀವು ಹೆಣ್ಣು ಅಥವಾ ಗಂಡೇ ಎಂದು ಗುರುತಿಸಿಕೊಳ್ಳಬೇಕು ಎಂದಾಗಲೀ ಅಥವಾ ಇನ್ನಿತರ ರೀತಿ ಬೆದರಿಕೆ ಹಾಕಿದರೆ ಜಿಲ್ಲಾಡಳಿತಕ್ಕೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
18 ವರ್ಷ ತುಂಬಿದ ಪ್ರತಿಯೊಬ್ಬರು ಚುನಾವಣಾ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಆಧಾರ್ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ಪ್ರತಿ ಲಿಂಗತ್ವ ಅಲ್ಪಸಂಖ್ಯಾತರು ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರಿ ಸೌಲಭ್ಯಗಳು ಸೇರಿದಂತೆ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತದೆ. ಸಕ್ರಿಯವಾಗಿ ಎಲ್ಲ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ಈಗ ಯಾರದ್ದಾದರೂ ಗುರುತಿನ ಚೀಟಿ ಆಗಿಲ್ಲದಿದ್ದರೆ ಈಗಲೇ ತಿಳಿಸಿ, ಮಾಡಿಸಿಕೊಡುತ್ತೇವೆ ಎಂದು ತಿಳಿಸಿದರು.

ಪೊಲೀಸ್ ಅಧೀಕ್ಷಕ ಸುರೇಶ್ ಎಂ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್ ಸ್ವಾಗತಿಸಿದರು. ಕರ್ನಾಟಕ ರಾಜ್ಯಮಟ್ಟದ ವಿಶಿಷ್ಟ ಲೈಂಗಿಕತೆ ಸಂಘಟನೆಯ ಒಕ್ಕೂಟ ‘ಸಾರಥ್ಯ’ ದ ಅಧ್ಯಕ್ಷ ಮಹಮ್ಮದ್ ಸೈಫುಲ್ಲಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಮಂಗಳ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post