ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನ ಸೋಂಕಿನಿಂದ ಪಾರಾಗಲು ಹಾಗೂ ಸುರಕ್ಷತಾ ಕ್ರಮವಾಗಿ 60ವರ್ಷ ಮೇಲ್ಪಟ್ಟವರು ಹಾಗೂ 45ವರ್ಷ ಮೇಲ್ಪಟ್ಟು ವಿವಿಧ ಕಾಯಿಲೆಗಳಿಂದ ಬಾದಿತರಾದವರಿಗೆ ಮೊದಲ ಆದ್ಯತೆಯಾಗಿ ಜಿಲ್ಲೆಯ ಆಯ್ದ 14 ಖಾಸಗಿ ಆಸ್ಪತ್ರೆಗಳು ಹಾಗೂ ತಾಲೂಕು ಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ಹಾಕಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‌ಸುರಗೀಹಳ್ಳಿ ಹೇಳಿದರು.
ಅವರು ನಗರದ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಏರ್ಪಡಿಸಲಾಗಿದ್ದ ಲಸಿಕಾ ಆಂದೋಲನದ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಲಸಿಕೆಯನ್ನು ಸರಬರಾಜು ಮಾಡಿ ಆಸಕ್ತರಿಗೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಶುಲ್ಕ 250ರೂ. ಗಳನ್ನು ಪಾವತಿಸಬೇಕಾಗುವುದು ಎಂದು ತಿಳಿಸಿದರು.
ಆಸಕ್ತರು ಕೋವಿನ್ ಆಪ್ ಅಥವಾ ಆರೋಗ್ಯ ಸೇತು ಆಪ್‌ನಲ್ಲಿ ನೋಂದಾಯಿಸಿಕೊಂಡು ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆಯನ್ನು ಪಡೆಯಬಹುದಾಗಿದೆ. ಅಲ್ಲದೆ ನೋಂದಣಿ ಕಷ್ಟವೆಂದಾದಲ್ಲಿ ಮತದಾರರ ಗುರುತಿನ ಚೀಟಿ, ಆಧಾರ್ ಸೇರಿದಂತೆ ತಮ್ಮ ಗುರುತಿನ ಚೀಟಿಯೊಂದಿಗೆ ಲಸಿಕಾ ಕೇಂದಕ್ಕೆ ಭೇಟಿ ನೀಡಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
45ವರ್ಷ ಮೇಲ್ಪಟ್ಟ ಹೃದಯ, ಕಿಡ್ನಿ, ರಕ್ತದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳಿಂದ ಅನಾರೋಗ್ಯ ಪೀಡಿತರು ಲಸಿಕೆ ಹಾಕಿಸಿಕೊಳ್ಳುವ ಮುನ್ನ ವೈದ್ಯರ ಪ್ರಮಾಣ ಹೊಂದಿರುವುದು ಕಡ್ಡಾಯವಾಗಿದೆ ಎಂದ ಅವರು, ಆರಂಭದ ಹಂತವಾಗಿ ನಗರದ ಸಹ್ಯಾದ್ರಿ ನಾರಾಯಣ, ಸುಬ್ಬಯ್ಯ ಮತ್ತು ಸರ್ಜಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ದೊರಯಲಿದೆ. ಲಸಿಕೆ ಪಡೆದ ವ್ಯಕ್ತಿಗಳನ್ನು ಅಲ್ಪಕಾಲದವರೆಗೆ ಆರೋಗ್ಯ ಇಲಾಖೆ ಸಿಬ್ಬಂಧಿಗಳ ಮುಲಕ ಗಮನಿಸಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲಿಚ್ಚಿಸುವವರಿಗೆ ಪ್ರತ್ಯೇಕವಾದ ಕೌಂಟರ್‌ಗಳನ್ನು ತೆರೆಯುವಂತೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆಯನ್ನು ನೀಡಲು ಕ್ರಮವಹಿಸಲಾಗುವುದು. ಪ್ರಸ್ತುತ ಪ್ರತಿ ಕೇಂದ್ರದಲ್ಲಿ 200 ಅಭ್ಯರ್ಥಿಗಳವರೆಗೆ ಲಸಿಕೆ ಹಾಕಲು ಅವಕಾಶ ಕಲ್ಪಿಸಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಬಂದಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು ಮರುದಿನ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸಕ್ತರಿಗೆ ಮಾಹಿತಿ ಪಡೆದು ಲಸಿಕೆ ಹಾಕಲಾಯಿತು. ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್. ಅಧಿಕಾರಿ ಡಾ. ನಾಗರಾಜ ನಾಯ್ಕ್, ಹೃದಯಾಲಯದ ನಿರ್ದೇಶಕ ಪವನ್‌ಕುಮಾರ್, ಡಾ. ಲಕ್ಷ್ಮೀ, ಹಿರಿಯ ವ್ಯವಸ್ಥಾಪಕ ರಾಜಸಿಂಗ್, ಎಬಿಎಆರ್‌ಕೆ ಸಂಯೋಜಕ ಪ್ರಕಾಶ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post