ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ #Shivamogga Mahanagara Palike ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹಮ್ಮಿಕೊಂಡಿದ್ದ ಇ-ಖಾತಾ #E-Katha ಅಭಿಯಾನವು ಸಂಪೂರ್ಣ ವಿಫಲವಾಗಿದ್ದು, ಕಾಟಾಚಾರಕ್ಕಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ಪ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಖಾತಾ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ, ಈ ಕುರಿತಂತೆ ಜಾಗೃತಿ ಕೊರತೆಯಿಂದಾಗಿ ಇದುವರೆಗೂ ಶೇ. 30ರಷ್ಟು ಮಾತ್ರ ಇ-ಖಾತಾ ಆಗಿರಬಹುದಾಗಿದೆ. ಇ-ಖಾತಾ ಪಡೆಯಲು ಸಾಕಷ್ಟು ಲಂಚ ಕೊಡಬೇಕು ಎಂಬ ದೂರುಗಳು ಕೂಡ ಕೇಳಿಬಂದಿದ್ದವು. ಮತ್ತು ಕೇಳಿ ಬರುತ್ತಲೇ ಇವೆ.
ಈ ನಡುವೆ ಮಹಾನಗರ ಪಾಲಿಕೆಯು ವಿವಿಧ ವಾರ್ಡ್ಗಳಲ್ಲಿ ಇ-ಖಾತಾ ಮೇಳವನ್ನು ಆಯೋಜಿಸಿ ಸೂಕ್ತ ದಾಖಲೆ ನೀಡಿ, ಇ-ಖಾತಾ ಪಡೆಯಬಹುದು ಎಂದು ಪ್ರಚಾರವನ್ನೂ ಕೂಡ ಮಾಡಿತ್ತು. ಆದರೆ, ಇ-ಮೇಳವು ಎಲ್ಲಿಯೂ ಯಶಸ್ವಿಯಾಗಿಲ್ಲ. ನಗರದ ಗಾಡಿಕೊಪ್ಪ, ವಿನೋಬನಗರ, ಗುಡ್ಡೇಕಲ್, ಸಹ್ಯಾದ್ರಿನಗರ, ಶಾಂತಿನಗರ, ಹೊಸಮನೆ, ಊರುಗಡೂರು, ಗೋಪಾಳ, ಮತ್ತು ಮಿಳಘಟ್ಟಗಳಲ್ಲಿ ನ. 11ರಿಂದ ಡಿ.3ರವರೆಗೆ ನಿಗದಿಪಡಿಸಿದ ಆಯಾ ಸ್ಥಳಗಳಲ್ಲಿ ಆಸ್ತಿ ಮಾಲೀಕರು ದಾಖಲೆಗಳನ್ನು ನೀಡಿ ಇ-ಖಾತೆ ಪಡೆಯುವಂತೆ ಸೂಚಿಸಲಾಗಿತ್ತು.
ಆದರೆ, ನಿಗದಿಪಡಿಸಿದ ಸ್ಥಳಗಳಲ್ಲಿ ಕೂಡ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಮತ್ತು ಬೇಕಂತಲೇ ವಿಳಂಬ ಮಾಡುತ್ತಿದ್ದು, ಹೀಗಾಗಿ ಇಲ್ಲಿ ಬಹಳಷ್ಟು ಜನರು ಇ-ಖಾತಾ ಮಾಡಿಸಿಕೊಳ್ಳಲು ಆಗಿಲ್ಲ. ಈ ವಿಶೇಷ ಮೇಳದಲ್ಲಿ ಶೇ. 10ರಷ್ಟು ಜನರು ಕೂಡ ಇ-ಖಾತಾ ಮಾಡಿಸಿಕೊಳ್ಳುವಲ್ಲಿ ಸಫಲರಾಗಿರಬಹುದು ಅಷ್ಟೇ. ಹಾಗಾಗಿ ಈ ಮೇಳ ಸಂಪೂರ್ಣ ವಿಫಲವಾಗಿದೆ.
ಈ ನಡುವೆ ಮಹಾನಗರ ಪಾಲಿಕೆಯ ಸಿಬ್ಬಂದಿಗಳೆಲ್ಲ ಅಧ್ಯಯನ ಪ್ರವಾಸಕ್ಕೆಂದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿದ್ದಾರೆ. ಸುಮಾರು 54ಕ್ಕೂ ಹೆಚ್ಚು ಸಿಬ್ಬಂದಿಗಳು, ಪೌರ ಕಾರ್ಮಿಕರು ತೆರಳಿರುವುದರಿಂದ ಯಾವುದೇ ಖಾತೆ ಮಾಡಿಸಿಕೊಳ್ಳಲು ಮತ್ತು ಪಾಲಿಕೆಯ ವಿವಿಧ ಕೆಲಸಗಳಿಗೆ ತೊಂದರೆಯಾಗಿದೆ. ಈ ಪ್ರವಾಸದಲ್ಲಿ ಕೆಲವು ಅಧಿಕಾರಿಗಳು ಕೂಡ ತೆರಳಿರುವುದರಿಂದ ಮಹಾನಗರ ಪಾಲಿಕೆಯ ಕೆಲಸಗಳೆಲ್ಲವೂ ಸಂಪೂರ್ಣ ಕುಂಠಿತಗೊಂಡಿವೆ. ಯಾವ ಉದ್ದೇಶಕ್ಕಾಗಿ ಪ್ರವಾಸ ಹೋಗುತ್ತಾರೆ? ಇದು ಸಾರ್ವಜನಿಕರ ತೆರಿಗೆ ಹಣ ನಷ್ಟ ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















