ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸತನದ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಳ್ಳುವ ಜೊತೆಗೆ ಅದು ನೀಡುವ ಫಲಿತಾಂಶವನ್ನು ಉತ್ಸಾಹದಿ ಒಪ್ಪಿಕೊಳ್ಳಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜಿನಲ್ಲಿ ಮಂಗಳವಾರ ಸಂಜೆ ಕಾಲೇಜಿನ ಎವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಗ್ರ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಅತಿ ದೊಡ್ಡ ಗುರು ಸಮಯ. ಅದು ಎಲ್ಲವನ್ನು ಕಲಿಸುತ್ತದೆ. ನಾವು ಏನು ಹೇಳುತ್ತೇವೆ ಎನ್ನುವುದಕ್ಕಿಂತ ಹೇಗೆ ಹೇಳುತ್ತೇವೆ ಎಂಬುದು ಒಂದು ಕೌಶಲ್ಯತೆಯೆ, ಹಾಗಾಗಿ ತಿಳುವಳಿಕೆಗಿಂತ ನಮ್ಮ ನಡವಳಿಕೆ ಮುಖ್ಯ. ಸಮಾಜ ಮತ್ತು ತಂದೆ ತಾಯಿಯ ಋಣ ತೀರಿಸುವ ಕೆಲಸ ನಾವು ಕಲಿತ ವಿದ್ಯೆಯಿಂದ ಆಗಬೇಕು. ತಾಯಿಯ ಮಡಿಲು ತಂದೆಯ ಹೆಗಲಿಗೆ ಎಂದಿಗೂ ಬೆಲೆ ಕಟ್ಟಲಾಗದು.
ಸಂಜೆ ಕಾಲೇಜಿನಲ್ಲಿ ಉದ್ಯೋಗಸ್ಥರು, ಗೃಹಿಣಿಯರು ವಿದ್ಯಾರ್ಥಿಗಳಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಉತ್ತಮ ಅವಕಾಶ ನೀಡುತ್ತಿದೆ. ಜೀವನದ ಕೊನೆಯತನಕ ನಮ್ಮ ಬಳಿಯಿರುವುದು ವಿದ್ಯೆ ಮಾತ್ರ. ಹೋರಾಟದ ಬದುಕಿಗೆ ವಿದ್ಯೆ ಅವಶ್ಯಕ. ನಾಲ್ಕು ಗೋಡೆಗಳ ನಡುವೆ ಕಲಿತ ಶಿಕ್ಷಣ ಜ್ಞಾನಾರ್ಜನೆಯಾದರೆ, ಕೌಶಲ್ಯತೆ ಎಂಬುದು ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುತ್ತದೆ. ನಾವು ಸೇವಿಸುವ ಆಹಾರ ಎಷ್ಟು ಶುದ್ಧವಾಗಿರಬೇಕು ಎಂದು ಹಂಬಲಿಸುತ್ತೆವೆ, ಅದೇ ರೀತಿಯಲ್ಲಿ ನಾವು ಆಡುವ ಮಾತುಗಳು ಶುದ್ಧವಾಗಿರಬೇಕು ಎಂಬ ಕಾಳಜಿ ನಿಮ್ಮಲ್ಲಿರಲಿ.
ಜ್ಞಾನಾರ್ಜನೆ ಪಠ್ಯದ ಕಲಿಕೆಗೆ ಸೀಮಿತವಾಗಿ ಉಳಿಯಬಾರದು. ವರ್ತಮಾನದ ಪತ್ರಿಕೆಗಳನ್ನು ಅಧ್ಯಯನ ಮಾಡಿ. ವಾಸ್ತವ ಬೆಳವಣಿಗೆಯ ಅರಿವನ್ನು ಪಡೆಯಿರಿ. ಪದಬಂಧಗಳನ್ನು ಭರ್ತಿ ಮಾಡುವಾಗ ನಮ್ಮಲ್ಲಿರುವ ಶಬ್ದಕೋಶ ಜ್ಞಾನಾರ್ಜನೆಯಾಗುತ್ತದೆ. ನಮ್ಮ ಮಾತೃಭಾಷೆಯನ್ನು ಬೆಳೆಸುವಲ್ಲಿ ಯುವ ಸಮೂಹ ಮುಂದಾಗಲಿ. ಅತ್ಯಂತ ಶ್ರೀಮಂತವಾದ ಕನ್ನಡ ಸಾರಸ್ವತ ಲೋಕವನ್ನು ಅಧ್ಯಯನ ಮಾಡಿ. ವಿನಯ ವಿವೇಕದ ಕಲಿಕೆಯೆ ನಿಜವಾದ ವಿದ್ಯಾಭ್ಯಾಸ. ಸದ್ದಿಲ್ಲದೆ ಶ್ರಮಿಸಿ, ಯಶಸ್ಸು ನಿಮ್ಮ ಬಗ್ಗೆ ಸದ್ದು ಮಾಡುತ್ತದೆ ಎಂದು ಹೇಳಿದರು.
ಉಪನ್ಯಾಸಕ ಪ್ರವೀಣ್.ಬಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗದ ಜೊತೆಗೆ ಕಲಿಕೆಯಲ್ಲಿ ಮುನ್ನಡೆಯಲು ಸಂಜೆ ಕಾಲೇಜು ಪೂರಕ ವೇದಿಕೆಯಾಗಿ ನಿಂತಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಘನಶ್ಯಾಮ್ ಅಧ್ಯಕತೆ ವಹಿಸಿದ್ದರು. ಉಪನ್ಯಾಸಕಿ ಶ್ರೀಲತಾ ಸ್ವಾಗತಿಸಿ, ನಕ್ಷಾ ನಿರೂಪಿಸಿ, ವಿದ್ಯಾರ್ಥಿಗಳಾದ ಕಾಮಾಕ್ಷಿ, ಚಂದನ ಪ್ರಾರ್ಥಿಸಿದರು.
ಇದೇ ವೇಳೆ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ವಿಕ್ರಮ್ ಕುಮಾರ್ ಹಾಗೂ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ವಿಶಾಂಕ್ ಅವರನ್ನು ಅತಿಥಿಗಳು ಅಭಿನಂದಿಸಿದರು
Discussion about this post