ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪನವರು ಇಂದು ಬೆಳಿಗ್ಗೆ ಮಹಾನಗರಪಾಲಿಕೆಯ ಮಹಾಪೌರರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ನಗರದಲ್ಲಿ ಪ್ರಗತಿಯಲ್ಲಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ವೀಕ್ಷಿಸಿ, ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ನಂತರ ಸ್ಮಾರ್ಟ್‍ಸಿಟಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಸ್ಮಾಟ್‍ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಿಂದೆ ಗುರಿ ನಿಗದಿಪಡಿಸಲಾಗಿದ್ದು, ಸಮಾಧಾನಕರವಾದ ಪ್ರಗತಿ ಸಾಧಿಸಲಾಗಿದೆ.
ಇಂದು ಶೇಷಾದ್ರಿಪುರಂ 4ನೇ ಮೇನ್ ಮತ್ತು ಕ್ರಾಸ್ ರಸ್ತೆಗಳಲ್ಲಿನ ಸ್ಮಾರ್ಟ್ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿ ಅಲ್ಲಿನ ಸಾರ್ವಜನಿಕರೊಂದಿಗೆ ಕಾಮಗಾರಿ ಕುರಿತು ಮಾತನಾಡಿದೆ. ಕಾಮಗಾರಿ ಉತ್ತಮವಾಗಿ ಆಗಿದೆ ಎಂದು ಅವರು ಸಂತೃಪ್ತತೆ ವ್ಯಕ್ತಿಪಡಿಸಿದ್ದಾರೆ ಎಂದು ಹೇಳಿದರು.
ಶಿವಪ್ಪನಾಯಕ ಅರಮನೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ, ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ 2022 ರ ಜೂನ್ ಮಾಹೆಯೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದೇನೆ. ಶಿವಪ್ಪನಾಯಕ ಅರಮನೆ ಎದುರಿಗೆ ಅರಣ್ಯ ಇಲಾಖೆಗೆ ಸೇರಿದ ಕಟ್ಟಡಗಳನ್ನು ತೆರವುಗೊಳಿಸುವಂತೆ ಸ್ಮಾರ್ಟ್ ಸಿಟಿ ಎಂ.ಡಿ ಯವರು ಇಲಾಖೆಗೆ ಪತ್ರ ಬರೆದಿದ್ದಾರೆ. ಆದಷ್ಟು ತ್ವರಿತವಾಗಿ, ಅತ್ಯುತ್ತಮ ಗುಣಮಟ್ಟದೊಂದಿಗೆ ಕಾಮಗಾರಿಗಳು ಆಗಬೇಕೆಂದು ಅಧಿಕಾರಿ/ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದರು.
ತುಂಗಾ ನದಿ ಮುಂಭಾಗ ಸೇರಿದಂತೆ ಕೋಟಿ ಮಾರಿಕಾಂಬ ದೇವಸ್ಥಾನದ ಮುಂಭಾಗ ನಡೆಯುತ್ತಿರುವ ಪಾರಂಪರಿಕ ನಡಿಗೆ(ಹೆರಿಟೇಜ್ ವಾಕ್) ಕಾಮಗಾರಿ ವೀಕ್ಷಣೆ ಮಾಡಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ಶಿವಪ್ಪನಾಯಕ ಸರ್ಕಲ್ ಬಳಿ ಮಲ್ಟಿ ಕಾರ್ ಪಾರ್ಕಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು ಅಲ್ಲಿರುವ ಕೆಲ ಹೂವಿನ ವ್ಯಾಪಾರಸ್ಥರಿಗೆ ಗುರುವಾರದೊಳಗೆ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗಿದೆ ಎಂದರು.
ಇನ್ನು ಮುಂದೆ ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿ ಮತ್ತು ಗುತ್ತಿಗೆದಾರರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಗುತ್ತಿಗೆದಾರರು ಕಾಮಗಾರಿಗಳ ಕುರಿತಂತೆ ಪ್ರತಿ ಮಾಹೆಯ ಗುರಿಯ ವರದಿಯನ್ನು ನೀಡುವಂತೆ ಹಾಗೂ ಸ್ಮಾರ್ಟ್ ಸಿಟಿ ಎಂ.ಡಿ ಯವರು ಗುತ್ತಿಗೆದಾರರಿಂದ ಪ್ರತಿ ವಾರ ಗುರಿ ಕುರಿತು ವರದಿ ಪಡೆದುಕೊಂಡು ಕಾರ್ಯೋನ್ಮುಖರಾಗುವಂತೆ ಸೂಚಿಸಿದ್ದೇನೆ.
ಮುಂದಿನ ಬುಧವಾರ ಅಥವಾ ಶುಕ್ರವಾರ ಪುನಃ ನಗರದಲ್ಲಿ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿ, ಗುತ್ತಿಗೆದಾರರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ. ಕಾಮಗಾರಿಗಳು ಸಾಕಷ್ಟು ಆಗಿವೆ. ಗುರಿ ಸಾಧನೆ ಇನ್ನೂ ಬಾಕಿ ಇದ್ದು ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಸಲಹೆ, ಸೂಚನೆ ನೀಡಿದ್ದೇನೆ ಎಂದರು.
ಈ ವೇಳೆ ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಮಹಾನಗರಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್‍ಸಿಟಿ ಎಂ.ಡಿ ಚಿದಾನಂದ ವಟಾರೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post