ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವ ಹಿನ್ನೆಲೆ ನಗರದಲ್ಲಿ ಅವರ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದ್ದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ನಿನ್ನೆಯವರೆಗೂ ಈಶ್ವರಪ್ಪನವರಿಗೆ ಟಿಕೆಟ್ ನಿಶ್ಚಿತ ಎಂದೇ ಹೇಳಲಾಗಿತ್ತು. ಆದರೆ, ಇಂದು ಏಕಾಏಕಿ ಸ್ವತಃ ಅವರೇ ರಾಜಕೀಯ ನಿವೃತ್ತಿ ಘೋಷಿಸಿರುವುದು ಜಿಲ್ಲೆಯ ಹಿರಿಯ ನಾಯಕರು ಹಾಗು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ನಿವೃತ್ತಿ ಘೋಷಣೆ ಸುದ್ಧಿ ಹೊರಬಿದ್ದ ನಂತರ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈಶ್ವರಪ್ಪ ನವರ ನಿವಾಸಕ್ಕೆ ದೌಡಾಯಿಸಿದ್ದು, ತಮ್ಮ ಈ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕೆಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಚನ್ನಬಸಪ್ಪ, ಮಾಜಿ ಮೇಯರ್ ಸುನೀತಾ ಅಣ್ಣಪ್ಪ, ಸುರೇಖಾ ಮುರಳೀಧರ್, ಬಳ್ಳೆಕೆರೆ ಸಂತೋಷ್ ಸೇರಿದಂತೆ ನಗರ ಹಾಗೂ ಜಿಲ್ಲಾಮಟ್ಟದ ಪ್ರಮುಖರು ಈಶ್ವರಪ್ಪನವರ ನಿವಾಸದಲ್ಲಿ ಮಾತುಕತೆ ನಡೆಸುತ್ತಿದ್ದು, ತಮ್ಮ ನಿರ್ಧಾರವನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದೇವೇಳೆ ತಮ್ಮ ನಿರ್ಧಾರವನ್ನು ಬದಲಾವಣೆ ಮಾಡಬೇಕು ಎಂದು ಸಿಟ್ಟಿಗೆದ್ದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಈಶ್ವರಪ್ಪ ಪ್ರಯತ್ನಿಸಿದ್ದಾರೆ.
ಕಾಂತೇಶ್‌ಗೆ ಟಿಕೆಟ್ ನೀಡಲು ಆಗ್ರಹ
ಈಶ್ವರಪ್ಪನವರ ರಾಜಕೀಯ ನಿವೃತ್ತಿ ಘೋಷಣೆ ವಿರುದ್ಧ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈಶ್ವರಪ್ಪನವರ ನಿವಾಸದ ಬಳಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಶಿವಮೊಗ್ಗದಲ್ಲಿ ಬಿಜೆಪಿ ಹಾಗೂ ಹಿಂದುತ್ವಕ್ಕೆ ಈಶ್ವರಪ್ಪನವರೇ ಶಕ್ತಿ. ಹೀಗಿರುವಾಗ ಅವರೇ ರಾಜಕೀಯ ನಿವೃತ್ತಿ ತೆಗೆದುಕೊಂಡರೆ ಹೇಗೆ ಈಶ್ವರಪ್ಪನವರಿಗೆ ಇಲ್ಲದಿದ್ದರೆ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಆಗ್ರಹಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















