ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಾಲ್ಯವಿವಾಹ #child marriage ಮುಕ್ತ ಭಾರತ ಮಾಡಲು ಎಲ್ಲರ ಸಹಕಾರವೂ ಅತಿ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ನ್ಯಾ. ಸಂತೋಷ್ ಎಂ.ಎಸ್. ಹೇಳಿದ್ದಾರೆ.
ಅವರು ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಜಿಲ್ಲಾಡಳಿತ ಶಿವಮೊಗ್ಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿ.ಪಂ., ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ವಕೀಲರ ಸಂಘದ ಸಹಯೋಗದೊಂದಿಗೆ ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ 100 ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಕ್ರಾಂತಿ ವಾತಾವರಣದಲ್ಲಿ ಬದಲಾವಣೆ ತರುವ ರೀತಿಯಲ್ಲಿ ಬಾಲ್ಯವಿವಾಹ ಮುಕ್ತ ಭಾರತ ಮಾಡಲು ಪ್ರತಿಯೊಬ್ಬ ನಾಗರೀಕನು ಕೈಜೋಡಿಸಬೇಕಾಗಿದೆ. ಬಾಲ್ಯವಿವಾಹ ತಡೆಗೆ ಕಾನೂನು ಬಂದು ಬಹಳ ವರ್ಷಗಳಾಗಿದೆ. ನಮ್ಮ ಜಿಲ್ಲೆಯಲ್ಲಿಯೇ ಕಳೆದ ಸಾಲಿನಲ್ಲಿ 79 ಬಾಲ್ಯವಿವಾಹ ಪ್ರಕರಣ ದಾಖಲಾಗಿದೆ. 2025ರ ನವೆಂಬರ್‌ವರೆಗೆ 49 ಪ್ರಕರಣ ದಾಖಲಾಗಿದ್ದು, ಕಠಿಣ ಕಾನೂನು ಇದ್ದರೂ ಅದನ್ನು ತಡೆಯುವಲ್ಲಿ ವಿಫಲರಾಗಿರುವುದು ವಿಪರ್ಯಾಸವಾಗಿದೆ ಎಂದರು.
ಪೋಕ್ಸೋ ಎರಡನೇ ಮೆಟ್ಟಿಲಾಗಿದ್ದು, ಹದಿಹರೆಯದ ಮಕ್ಕಳು ಪ್ರೀತಿಯ ತಪ್ಪುಕಲ್ಪನೆಯಲ್ಲಿ ಗರ್ಭಧರಿಸಿದಾಗ ಪೋಷಕರು ಅನಿವಾರ‍್ಯವಾಗಿ ಬಾಲ್ಯವಿವಾಹ ಮಾಡುತ್ತಾರೆ. ಹಲವು ಸಮಾಜದಲ್ಲಿ ಇದು ನಡೆಯುತ್ತಾ ಇದೆ. ನಮ್ಮ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 150 ರಿಂದ 200 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಬಹಳಷ್ಟು ಪ್ರಕರಣಗಳು ಸಮ್ಮತಿ ಮೂಲಕ ಆಗುತ್ತದೆ. ಕೆಲವು ರಾಜೀ ಸಂದಾನದ ಮೂಲಕ ಮುಚ್ಚಿಹೋಗುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಅದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ದುರಂತದ ಸಂಗತಿ ಎಂದರೆ ನಮ್ಮ ಗಮನಕ್ಕೆ ಬಂದರೂ ನಾವು ಕಡೆಗಣಿಸುತ್ತೇವೆ. ಇದು ನಮ್ಮ ಮನೆಗೆ ಕೆಲಸ ಎಂದು ತಿಳಿದು ಮಾಡಬೇಕು. ಬಾಲ್ಯವಿವಾಹದ ಬಗ್ಗೆ ಗೊತ್ತಿದ್ದೂ ತಿಳಿಸಿದೇ ಇದ್ದರೆ ಅಥವಾ ವಿವಾಹದಲ್ಲಿ ಬಾಗಿಯಾದರೆ, ಅಡಿಗೆ ಮಾಡಿದರೆ, ಭವನ ಬಾಡಿಗೆಗೆ ನೀಡಿದರೆ ಎಲ್ಲವೂ ಕೂಡ ಶಿಕ್ಷಾರ್ಹ ಅಪರಾಧವಾಗಿದ್ದು ಕೇವಲ ಪೋಷಕರಷ್ಟೇ ಅಲ್ಲ, ಮದುವೆಯಲ್ಲಿ ಭಾಗವಹಿಸಿದವರೂ ಕೂಡ ಶಿಕ್ಷಾರ್ಹರಾಗುತ್ತಾರೆ. ಕನಿಷ್ಠ 1ವರ್ಷ ಜೈಲುಶಿಕ್ಷೆ, ಗರಿಷ್ಠ 2ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ಇದ್ದು, ಕಠಿಣ ಕಾನೂನು ಇದ್ದರೂ ಸಹ ಇದು ಮುಂದುವರಿದಿದೆ. ಮದುವೆ ಹೇಳಿಕೆಗೆ ಬಂದಾಗ ಬಾಲ್ಯ ವಿವಾಹವೇ ಎಂದು ಆಧಾರ್‌ಕಾರ್ಡ್ ನೋಡಿದರೂ ತಪ್ಪಿಲ್ಲ ಎಂದರು.
ಶಾಲೆಗಳಲ್ಲಿ ಶಿಕ್ಷಕರಿಗೆ ಗೊತ್ತಾದರೂ ಸಹ ಅವರು ಕೂಡಲೇ ಮಾಹಿತಿ ನೀಡಬೇಕು. ಸಿಎಂ-ಸಿಓ ಎಂದು ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು ಅವರು ಬಾಲ್ಯವಿವಾಹ ನಡೆಯುತ್ತಿದ್ದರೆ ಅದನ್ನು ತಡೆಯುವ ಉದ್ದೇಶದಿಂದ ಈ ನೇಮಕವಾಗಿದೆ ಎಂದರು.
ಒಂದು ಅಪರಾಧವಾಗಬಾರದು ಎಂದರೆ ಸಮಾಜ ಒಟ್ಟಾಗಬೇಕು ಎಂಬ ಸೂಚನೆ ಈ ಕಾಯ್ದೆಯಲ್ಲಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಶೋಷಣೆಗೆ ಒಳಗಾದವರು ಈ ಅನಿಷ್ಠ ಪದ್ಧತಿಗೆ ಬಲಿಯಾಗುತ್ತಾರೆ ಎಂದರು. ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ಕಡ್ಡಾಯ ಎಂದರು.
ವಕೀಲ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಮಾತನಾಡಿ, ಬಾಲ್ಯವಿವಾಹದಿಂದ ಕುಟುಂಬವೇ ಸರ್ವನಾಶವಾಗುತ್ತದೆ. ಸಮಸ್ಯೆ ಬಂದಾಗ ಯಾವ ರೀತಿ ಎದುರಿಸಬೇಕೆಂಬ ಸಾಮಾರ್ಥ್ಯ ಅವರಲ್ಲಿ ಇರುವುದಿಲ್ಲ. ದೈಹಿಕ ಸಾಮರ್ಥ್ಯ ಕೂಡ ಇಲ್ಲದೆ ದುಷ್ಪರಿಣಾಮ ಉಂಟಾಗುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬ ಉಳಿದರೆ ದೇಶ ಉಳಿಯುತ್ತದೆ. ದೇಶ ಉಳಿದರೆ ಎಲ್ಲರೂ ಉಳಿಯುತ್ತಾರೆ ಎಂಬ ಸದುದ್ದೇಶದಿಂದ ಬಾಲ್ಯವಿವಾಹ ಕಾಯ್ದೆಯನ್ನು ಜಾರಿಗೊಳಿಸಿದೆ. ಮದುವೆಯ ಮೂಲಕ ಪರಿಹಾರ ಮಾಡಲಾಗುವುದಿಲ್ಲ. ಪ್ರೀತಿಯಿಂದ ಬುದ್ಧಿಹೇಳಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಬಾಲ್ಯ ವಿವಾಹದ ಪರಿಣಾಮಗಳ ಬಗ್ಗೆ ಮತ್ತು ಜಾಗೃತಿ ಮೂಡಿಸುವ ಅವಶ್ಯಕತೆ ಬಗ್ಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಕ್ಷಯ, ಅಕ್ಷತಾ, ಅಧಿಕಾರ ಅನುಪಮಾ ಹಾಗೂ ವಿವಿಧ ಮಹಿಳಾ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















