ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಂಸ್ಕೃತಿಕ ರಾಷ್ಟ್ರದಲ್ಲಿ ಬಾಳುತ್ತಿರುವ ನಮ್ಮಲ್ಲಿ ಸೃಜನಶೀಲತೆ ಎಂಬುದು ಸದಾ ಪ್ರಕಾಶಿಸುತ್ತಿರಲಿ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಾಂಸ್ಕೃತಿಕ ಮತ್ತು ನಿರ್ವಹಣಾ ಘಟಕಗಳ ವತಿಯಿಂದ ಶುಕ್ರವಾರ ವಿವಿಧ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೆ ‘ಕೌಶಲ್ಯ-2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆ ಸಾಹಿತ್ಯ ಸಂಸ್ಕೃತಿ ನಮ್ಮ ದೇಶದ ಅಸ್ಮಿತೆ. ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಸದಾ ಶಕ್ತಿ ತುಂಬುವ ಕಾರ್ಯ ನಡೆಯುತ್ತಿದೆ. ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಇಂದಿನ ದಿನಮಾನದಲ್ಲಿ ಹೆಚ್ಚು ಮಹತ್ವ ಸಿಗುತ್ತಿದೆ. ಅಂತಹ ಚಟುವಟಿಕೆಗಳು ನಮ್ಮಲ್ಲಿ ಅದ್ಭುತ ಆತ್ಮವಿಶ್ವಾಸ ಮೀಡಿಸಲಿದ್ದು, ಶಕ್ತಿಯುತ ವ್ಯಕ್ತಿತ್ವವಾಗಿ ಹೊರಹೊಮ್ಮಲು ಪ್ರೇರಕವಾಗಲಿದೆ ಎಂದು ಹೇಳಿದರು.
Also read: ಬೆಂಗಳೂರು | ಲೋಕ ಕಲ್ಯಾಣಕ್ಕಾಗಿ ಗುರು ರಾಯರ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ
ವಿಧಾನಪರಿಷತ್ತಿನ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇಂದಿನ ದಿನಮಾನದಲ್ಲಿ ಶಿಕ್ಷಣದ ಜೊತೆಗೆ ಸೃಜನಶೀಲತೆ ಬೆಳೆಸುವ ಅನೇಕ ವೇದಿಕೆಗಳು ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ಸಂಗತಿ. ಅಂದಿನ ದಿನಮಾನ ಸಾಂಸ್ಕೃತಿಕ ಚಟುವಟಿಕೆ ಎಂಬುದು ಸೀಮಿತತೆಯ ಒಳಗೆ ಇತ್ತು. ಅದರೆ ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳ ಆಸಕ್ತ ವಿಷಯಗಳನ್ನು ಅಧ್ಯಯನ ಮಾಡುವಂತಹ ಹಾಗೂ ಹೆಚ್ಚು ತೊಡಗಿಸಿಕೊಳ್ಳವ ಅನೇಕ ಅವಕಾಶಗಳನ್ನು ಮಾಡಿಕೊಡುತ್ತಿದೆ.
ಇಂದು ಕಲೆ ಸಾಹಿತ್ಯ ಶಿಕ್ಷಣ ಸೇರಿದಂತೆ ಎಲ್ಲಾ ರಂಗದಲ್ಲಿ ಹೆಣ್ಣು ಮಕ್ಕಳು ಮೇಲುಗೈ ಸಾಧಿಸುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಗಂಡು ಎಂಬ ಬೇಧ ಭಾವವಿಲ್ಲ. ಎಐ ತಂತ್ರಜ್ಞಾನದ ಈ ಹೊತ್ತಿನಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯುವ ಸಮೂಹ ಹೆಚ್ಚು ತೊಡಗಿಸಿಕೊಳ್ಳುವುದರ ಮೂಲಕ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸದೊಂದಿಗೆ ಯಶಸ್ವಿ ಸಾಧಕರಾಗಿ ಹೊರಹೊಮ್ಮಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕ ಟಿ.ಆರ್.ಅಶ್ವಥ ನಾರಾಯಣ ಶ್ರೇಷ್ಟಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 24 ಕ್ಕು ಹೆಚ್ಚು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಬೆಸ್ಟ್ ಸಿಇಓ, ಮೊಬೈಲ್ ಫೋಟೋಗ್ರಫಿ, ಸಾಮಾನ್ಯ ಜ್ಞಾನ, ಸಂಯೋಜಿತ ಆಟಗಳು, ಹಾಡು ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post