ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಬೇಡಿಕೆಗಳನ್ನುಈಡೇರಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಮೈಸೂರು ಕಾಗದ ಕಾರ್ಖಾನೆಯ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರದಲ್ಲಿ ಪ್ರತಿಭಟನೆ ನಡೆಸಿ ಎಂಪಿಎಂ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಜಿಲ್ಲಾಧಿಕಾರಿಗಳಿವೆ ಮನವಿ ಸಲ್ಲಿಸಿದರು.
ಎಂಪಿಎಂ ಕಾರ್ಖಾನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಾವು ನಿವೃತ್ತರಾಗಿದ್ದೇವೆ. ಆದರೆ ತಮಗೆ ಬರಬೇಕಾದ ನ್ಯಾಯಯುತವಾದ ಹಣಕಾಸು ಸೌಲಭ್ಯಗಳು ತಲುಪಿಲ್ಲ. ಕಾರ್ಮಿಕರಿಗೆ ತುಂಬಾ ಅನ್ಯಾಯವಾಗಿದ್ದು, ಅವನ್ನು ಕೂಡಲೇ ಸರಿಪಡಿಸಬೇಕು ಎಂದು ಪ್ರತಿಭಟನಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಜಿ. ವೆಂಕಟೇಶಮೂರ್ತಿ, ಎನ್. ರಘುನಂದನ್ ರಾವ್, ಟಿ.ಜಿ. ಬಸವರಜಯ್ಯ, ಗೋವಿಂದಪ್ಪ, ಶಿವಲಿಂಗಯ್ಯ, ಆರ್.ಎ. ಬಾಪು ಸೇರಿದಂತೆ ಹಲವರಿದ್ದರು.
ಕಳಪೆ ಕಾಮಗಾರಿ ತನಿಖೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ:
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗಳನ್ನು ತನಿಖೆ ನಡೆಸಿ ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಮುಖಂಡರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರದಲ್ಲಿ ಪ್ರತಿಭಟನೆ ನಡೆಸಿದರು.
ಯೋಜನೆಯ ಎಲ್ಲಾ ಕಾಮಗಾರಿಗಳು ಕಳಪೆಯಾಗಿವೆ. ಹೈಮಾಸ್ಕ್ ದೀಪಗಳ ಅಳವಡಿಕೆ, ಅಂಬೇಡ್ಕರ್ ಭವನಕ್ಕೆ ಮಂಜೂರಾದ ಭೂಮಿಯನ್ನು ಮಾರಾಟ ಮಾಡಲಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು 5ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆಗಳು ಕಳಪೆಯಾಗಿವೆ. ಪರಿಶಿಷ್ಟರ ಕಾಲೋನಿಯಲ್ಲಿ ನಡೆಸಬೇಕಾಗಿದ್ದ ಕಾಮಗಾರಿಗಳನ್ನು ಮೇಲ್ವರ್ಗದ ಕೇರಿಗಳಲ್ಲಿ ನಡೆಸಲಾಗಿದೆ. ಈ ಬಗ್ಗೆ ಗ್ರಾಮಾಂತರ ಶಾಸಕರು ಮೌನವಾಗಿದ್ದಾರೆ ಎಂದು ದೂರಿ, ಪ್ರತಿಭಟನಕಾರರು ಹಲವು ಬೇಡಿಕೆಗಳನ್ನು ಇಟ್ಟುಕೊಂಡುಇಂದಿನಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ಪ್ರತಿಭಟನೆಯಲ್ಲಿ ದಸಂಸನ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಆನಂದ್, ಶಿವಕುಮಾರ್, ಅಪ್ಪಿ ಸೇರಿದಂತೆ ಹಲವರಿದ್ದರು.
ಡಾ.ಬಿ.ಆರ್. ಅಂಬೇಡ್ಕರ್‌ರವರಿಗೆ ಅಪಮಾನ ಹಿನ್ನೆಲೆ ಕ್ರಮಕ್ಕೆ ಆಗ್ರಹ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿರುವ ಜೈನ್ ವಿಶ್ವವಿದ್ಯಾಲಯದ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಶಿವಮೊಗ್ಗ, ಸಂವಿಧಾನ ಹಕ್ಕುಗಳ ಸಂರಕ್ಷಣಾ ಸಮಿತಿ ಮತ್ತು ಭೀಮಪುತ್ರಿ ಬ್ರಿಗೇಡ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
Also read: ಫೆ.20ರಂದು ಭದ್ರಾವತಿಗೆ ಪೇಜಾವರ ಶ್ರೀಗಳ ಭೇಟಿ: ಯಾವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ
ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ನಾಟಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ನ್ನು ವ್ಯಂಗವಾಗಿ ಬೀರ್ ಅಂಬೇಡ್ಕರ್ ಎಂದು ಉಚ್ಚರಿಸಲಾಗಿದೆ. ಮತ್ತು ಪರಿಶಿಷ್ಟ ಜಾತಿಗಳ ಜನರಿಗೆ ಅಪಮಾನವಾಗುವಂತೆ ವ್ಯಂಗ್ಯವಾಗಿ ನಾಟಕದಲ್ಲಿ ಬಿಂಬಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮತ್ತು ಜೈನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸಂಘಟನೆಗಳು ಆಗ್ರಹಿಸಿದ್ದು, ಕಾನೂನು ಕ್ರಮಕೈಗೊಳ್ಳದಿದ್ದರೆ ದಲಿತ ಸಮುದಾಯಗಳು ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಭೀಮಪುತ್ರಿ ಬ್ರಿಗೇಡ್‌ನ ಜಿಲ್ಲಾಧ್ಯಕ್ಷರಾದ ಚಿರಂಜೀವಿ ಬಾಬು, ರಾಜ್ಯ ಯೂತ್ ಅಧ್ಯಕ್ಷರಾದ ರುದ್ರೇಶ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್, ನಿರಂಜನ್‌ಮೂರ್ತಿ, ಸುನೀಲ್ ಎನ್., ಅನೂಪ್ ವಿ, ರಾಮ್‌ಕುಮಾರ್, ಎಲ್.ಶ್ರೀಧರ್ ಮತ್ತಿತರರಿದ್ದರು. (ಫೋಟೊ ಇದೆ)
ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಕ್ರಮಕ್ಕೆ ಆಗ್ರಹ
ಕಳೆದ 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ಲಂಬಾಣಿ, ಬಂಜಾರ ಸಮುದಾಯಗಳಿಗೆ ಸೇರಿದ ಜಮೀನುಗಳನ್ನು ಅರಣ್ಯ ಇಲಾಖೆ ಅರಣ್ಯ ಭೂಮಿಯೆಂದು ಸರ್ವೆಮಾಡಿ ರೈತರ ಎದೆಯ ಮೇಲೆ ಕಲ್ಲು ನೆಡುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕುಂಚೇನಹಳ್ಳಿ, ಕಲ್ಲಾಪುರದ ರೈತರು ಹಾಗೂ ಭದ್ರಾವತಿಯ ಸಿರಿಯೂರು ಗ್ರಾಮದ ಪರಿಶಿಷ್ಟ ಪಂಗಡಗಳ ರೈತರು ಜಿಲ್ಲಾಧಿಕಾರಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಮತ್ತು ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹಲವಾರು ವರ್ಷಗಳಿಂದ ಈ ಭಾಗದ ರೈತರು ಸಾಗುವಳಿ ನಡೆಸುತ್ತಿದ್ದು, ಹೈಕೋರ್ಟ್ ಆದೇಶದಂತೆ ಜಂಟಿ ಸರ್ವೆ ನಡೆಸಿ ಕೆಲವರಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿದೆ. ಇನ್ನು ಉಳಿದ ರೈತರು ಸರ್ಕಾರದ ಆದೇಶದಂತೆ ಫಾರಂ 50, 53, 57ರ ಅಡಿಯಲ್ಲಿ ಸಾಗುವಳಿ ಹಕ್ಕುಪತ್ರಕ್ಕೆ ಅರ್ಜಿಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಈ ರೀತಿಯ 50 ಸಾವಿರಕ್ಕೂ ಹೆಚ್ಚು ರೈತರು ಬಗರ್‌ಹುಕ್ಕುಂ ಸಾಗುವಳಿ ನಡೆಸುತ್ತಿದ್ದು, ಅವರೆಲ್ಲರಿಗೂ ಸರ್ಕಾರ ಹಕ್ಕುಪತ್ರ ನೀಡಬೇಕಾಗಿದೆ. ಆದರೆ ರಾಜ ಮಹಾರಾಜರ ಮತ್ತು ಬ್ರಿಟೀಷರ ಕಾಲದಲ್ಲಿ ಅರಣ್ಯವೆಂದು ಘೋಷಣೆ ಮಾಡಿದ್ದನ್ನು ಈಗ ಇಲಾಖೆ ದಾಖಲಿಸಲು ಹೊರಟಿದೆ. ಸುಪ್ರೀಂಕೋರ್ಟಿಗೂ ತಪ್ಪು ಮಾಹಿತಿ ನೀಡಿದ್ದು, ಕೋರ್ಟ್ ಆದೇಶ ಎಂದು ಮುಂದಿಟ್ಟುಕೊಂಡು ರೈತರನ್ನು ಅರಣ್ಯ ಭೂಮಿಯ ನೆಪಹೇಳಿ ಒಕ್ಕಲೆಬ್ಬಿಸುವ ಉದ್ಧಟತನವನ್ನು ಅರಣ್ಯ ಇಲಾಖೆ ಮುಂದುವರೆಸಿದೆ.
ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ರೈತರ ಹಿತಕಾಯಬೇಕಿದ್ದ ಸರ್ಕಾರ. ಮತ್ತು ಜನಪ್ರತಿನಿಧಿಗಳು ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಹಕ್ಕುಪತ್ರ ನೀಡದಿದ್ದರೆ ಸಾವಿರಾರು ರೈತರೊಂದಿಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕುಂಚೇನಹಳ್ಳಿ ರೈತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ತಿ.ನ.ಶ್ರೀನಿವಾಸ್ ಹಾಗೂ ಕುಂಚೇನಹಳ್ಳಿಯ ಸಂತ್ರಸ್ತ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post