ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ Sharavati pumped storage project ವಿರುದ್ಧ ಹಮ್ಮಿಕೊಳ್ಳಲಾಗುವ ಮುಂದಿನ ಹೋರಾಟದ ರೂಪು-ರೇಷಗಳನ್ನು ಇನ್ನೊಂದೆರೆಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ K S Eshwarappa ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಲು ಕರೆದ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ, ಕೆಪಿಸಿಎಲ್ ಅಧಿಕಾರಿಗಳೊಂದಿಗೆ ಹಲವು ಸಭೆಗಳು ನಡೆದಿದ್ದರೂ ಕೆಪಿಸಿಎಲ್ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ “ಪರಿಸರಕ್ಕಾಗಿ ನಾವು” ಮತ್ತು “ರಾಷ್ಟ್ರಭಕ್ತರ ಬಳಗ”ದ ವತಿಯಿಂದ ತಮ್ಮ ನೇತೃತ್ವದಲ್ಲಿ ಇಂದು ಮತ್ತೊಮ್ಮೆ ಜಿಲ್ಲಾಧಿಕಾರಿಗಳನ್ನು ನಿಯೋಗದೊಂದಿಗೆ ಭೇಟಿಮಾಡಿ ಚರ್ಚಿಸಲಾಯಿತು. ಜಿಲ್ಲಾಧಿಕಾರಿಗಳೇ ಕೆಪಿಸಿಎಲ್ ಎಂ.ಡಿ. ಕಛೇರಿಯ ಸಿಬ್ಬಂದಿ ಉಮಾಪತಿ ಎಂಬುವವವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಮಗ್ರ ಮಾಹಿತಿ ಒದಗಿಸಲು ಕೇಳಲಾಗಿತ್ತು. ಆದರೆ ಇಂದಿನವರೆಗೂ ಆ ಮಾಹಿತಿಯನ್ನು ಪೂರೈಸದೇ ಇರುವ ಕಾರಣಗಳನ್ನು ಕೇಳಿದಾಗ ಯೋಜನೆಯ ಯಾವುದೇ ಮಾಹಿತಿಯನ್ನು ಹೊರಹಾಕಕೂಡದ ಎಂಬ ಆದೇಶ ಮೇಲಧಿಕಾರಿಗಳಿಂದ ಇರುವುದರಿಂದ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಆ ಅಧಿಕಾರಿ ತಿಳಿಸಿದರು.
ಈಶ್ವರಪ್ಪ ಅವರು ಅದೇ ದೂರವಾಣಿಯಲ್ಲಿ ಕೆಪಿಸಿಎಲ್ ಅಧಿಕಾರಿ ಉಮಾಪತಿಯೊಂದಿಗೆ ಮಾತನಾಡಿ, ಈಗಾಗಲೇ ನಾಲ್ಕು ಬಾರಿ ಜಿಲ್ಲಾಧಿಕಾರಿಗಳ ಮೂಲಕವೇ ನಿಮಗೆ ಮಾಹಿತಿ ಕೊಡುವಂತೆ ಪತ್ರ ಬರೆದಿದ್ದೆವು. ಅಲ್ಲದೆ ಅಹೋರಾತ್ರಿ ಧರಣಿಯನ್ನೂ ಕೈಗೊಂಡಿದ್ದೆವು. ಆದರೂ ತಮ್ಮಿಂದ ಇಲ್ಲಿಯವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಯೋಜನೆಯ ವಿರುದ್ಧ ಮುಂಬರುವ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಅಧಿಕಾರಿಗಳ ಗಮನಕ್ಕೆ ತಂದರು. ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಬರಬಾರದು. ಮಾನ್ಯ ಉಚ್ಛ ನ್ಯಾಯಾಲಯವು ಈ ಕುರಿತಂತೆ ಕೆಪಿಸಿಎಲ್‌ಗೆ ಯೋಜನೆಯ ವಿರುದ್ಧ ಛೀಮಾರಿ ಹಾಕಿದೆ. ಇದನ್ನು ಕೆಪಿಸಿಎಲ್ ಗಮನಿಸಬೇಕು ಎಂದರು.
ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಕೆಪಿಸಿಎಲ್ ಅಧಿಕಾರಿಗಳೊಂದಿಗೆ ದೂರವಾಣಿ ಸಂಪರ್ಕ ಮಾಡಿ ಸೂಕ್ತ ಪ್ರತ್ಯುತ್ತರ ನೀಡುವಂತೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಕೆ.ಈ. ಕಾಂತೇಶ್, ಶ್ರೀಕಾಂತ್, ಜನಾರ್ಧನ್ ಪೈ, ಶೇಖರ್ ಗೌಳೇರ್, ಅಶೋಕ್ ಗಾಂಧಿ ಬಸಪ್ಪ, ಅ.ಮ. ಪ್ರಕಾಶ್, ಕುಬೇರಪ್ಪ ಪಿ.ಹೆಚ್., ಅ.ನಾ.ವಿಜೇಂದ್ರ ಮತ್ತಿತರರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















