ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅನುಮತಿ ಇಲ್ಲದೆ ನನ್ನ ಪೋಟೋ ವೀಡಿಯೋಗಳನ್ನು ತಿರುಚಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರಹಗಳನ್ನು ಹರಿಬಿಟ್ಟವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಸಂಸದ ಬಿ.ವೈ.ರಾಘವೇಂದ್ರ #B Y Raghavendra ಅವರ ಷಡ್ಯಂತರವಿದ್ದು, ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಸ್.ಈಶ್ವರಪ್ಪ #K S Eshwarappa ಹೇಳಿದರು.
ಸ್ವತಂತ್ರವಾಗಿ ಸ್ಪರ್ಧೆಗೆ ನಿಂತಮೇಲೆ ಬಿ.ವೈ.ರಾಘವೇಂದ್ರ ಅವರು ಇಲ್ಲದ ಷಡ್ಯಂತರ ಮಾಡಿದರು. ಜಾತಿಯ ಹೆಸರಿನಲ್ಲಿ ಮತಕೇಳುತ್ತ ಹಿಂದು ಧರ್ಮದ ಮಾತೇ ಆಡಲಿಲ್ಲ. ಶಿಕಾರಿಪುರದಲ್ಲಿ ನಾನು ಗೆಲ್ಲಬಾರದೆಂದು ವಾಮಾಚಾರ ಮಾಡಿದರು. ನನ್ನ ಪ್ರಚಾರಕ್ಕೆ ಅಡ್ಡಿಪಡಿಸಿದರು. ಕೊನೆಗೆ ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂಬ ವೀಡಿಯೋವನ್ನು ಹರಿಬಿಟ್ಟರು. ಕಳೆದ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದ ವೀಡಿಯೋವನ್ನೇ ಈ ಬಾರಿ ಎಂಬಂತೆ ಬಿಂಬಿಸಿದರು. ಪತ್ರಿಕೆಯಲ್ಲಿ ಪ್ರಕಟವಾದಂತೆ ನಾನು ಕಣದಿಂದೆ ಹಿಂದೆ ಸರಿದಿದ್ದೇನೆ. ರಾಘವೇಂದ್ರ ಅವರಿಗೆ ಮತ ನೀಡಿ ಎಂಬ ಬರಹವನ್ನು ಹಬ್ಬಿಸಿದರು. ಇದೆಲ್ಲ ರಾಘವೇಂದ್ರ ಅವರ ಕುತಂತ್ರವೇ ಆಗಿದೆ ಎಂದು ಹರಿಹಾಯ್ದರು.
ನನಗೆ ಈಗ ಬಹಳ ಅನ್ಯಾಯವಾಗಿದೆ. ನಾನು ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಕೊಟ್ಟಿದ್ದೇನೆ. ಮೇ 15ನೇ ತಾರೀಖಿನವರಿಗೆ ಸಮಯ ನೀಡುತ್ತೇನೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಮತ್ತು ಬಂಧಿಸಬೇಕು ಎಂದು ಆಗ್ರಹಿಸಿದರು.
Also read: ನಾನೊಬ್ಬ ಅಭಿಮಾನಿಯಾಗಿ ಅವರನ್ನು ಭೇಟಿಯಾಗಬೇಕು ಎಂದು ನಟ ದರ್ಶನ್ ಹೇಳಿದ್ದು ಯಾರಿಗೆ?
ಬಿಜೆಪಿಯಲ್ಲಿನ ಶುದ್ಧೀಕರಣಕ್ಕಾಗಿ, ಕುಟುಂಬ ರಾಜಕಾರಣವನ್ನು ವಿರೋಧಿಸಿ, ಹಿಂಧುತ್ವದ ರಕ್ಷಣೆಗಾಗಿ ಚುನಾವಣೆಗೆ ನಿಂತಿದ್ದೆ,ನನಗೆ ಅಪಾರ ಬೆಂಬಲ ಸಿಕ್ಕಿದೆ ಹಿಂದುಳಿದವರು, ದಲಿತರು ಮುಂತಾದ ಅನೇಕರು ನನಗೆ ಮತಹಾಕಿದ್ದಾರೆ. ಆಯನೂರು ಮಂಜುನಾಥ ಕೂಡ ನನಗೆ ಮತಹಾಕುವುದಾಗಿ ಹೇಳಿದ್ದರು. ಆದರೆ ಈ ಫೇಕ್ ವೀಡಿಯೋ ನೋಡಿ ಅವರು ಹಾಕಿಲ್ಲ, ಹೀಗೆ ಕಾಂಗ್ರೆಸ್ಸಿನವರ ಅನೇಕ ಮತಗಳು ನನಗೆ ಮಿಸ್ಸಾಗಿವೆ. ಆದರೂ ಕೂಡ ನಾನು ಗೆದ್ದೇ ಗೆಲ್ಲುತ್ತೇನೆ ಎಂದರು.
ಈ ಬಾರಿ ಮುಸ್ಲಿಂರು ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಹಿಂದೂ ಸಮಾಜ ಇದನ್ನು ಗಮನಿಸಬೇಕು. ಜಾತಿಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ಕೆಲಸವಾಗುತ್ತಿದೆ. ಇದನ್ನು ಕೆಲವರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗನ್ನಿಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ಕಾಂತೇಶ್, ಶಿವಾಜಿ, ರಾಜಣ್ಣ, ಬಾಲು, ಮೋಹನ್, ಚನ್ನಬಸಪ್ಪ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























