ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ JNN Engineering College ಎಐಸಿಟಿಇ ನೇತೃತ್ವದಲ್ಲಿ ಭಾರತ ಶಿಕ್ಷಣ ಸಚಿವಾಲಯ, ವಾದ್ವಾನಿ ಫೌಂಡೇಷನ್ ಹಾಗೂ ಎಸ್‌ಬಿಐ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಏ.6 ರಿಂದ 10 ರವರೆಗೆ ಐದು ದಿನಗಳ ಕಾಲ ನಾವೀನ್ಯತೆ ಮತ್ತು ಉದ್ಯಮಶೀಲತೆ ಬೂಟ್ ಕ್ಯಾಂಪ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಏ.6 ರ ಸೋಮವಾರ ಬೆಳಗ್ಗೆ 10 ಗಂಟೆಗೆ ಎಂಬಿಎ-ಎಂಸಿಎ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ, ಎಐಸಿಟಿಇ ಇನೋವೇಶನ್ ಕೇಂದ್ರದ ಪ್ರಾದೇಶಿಕ ಸಂಯೋಜಕರಾದ ಅಶೀಷ್ ತ್ರಿಪಾಠಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಅರೇಕಾ ಟೀ ಕಂಪನಿಯ ಸಂಸ್ಥಾಪಕರಾದ ನಿವೇದನ್ ನೆಂಪೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಐಸಿಟಿಇ ಜೆಎನ್‌ಎನ್‌ಸಿಇ ಐಡಿಯಾ ಲ್ಯಾಬ್ ಸಂಯೋಜಕ ಡಾ.ಎಂ.ಎಚ್.ಮೋಯಿನುದ್ದಿನ್ ಖಾನ್, ಬೂಟ್‌ಕ್ಯಾಂಪ್ ಸಂಯೋಜಕ ಕೆ.ಎಲ್.ಅರುಣ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿರಲ್ಲಿದ್ದಾರೆ.
2023 ರಲ್ಲಿ ಎಐಸಿಟಿಇ ಬೂಟ್‌ಕ್ಯಾಂಪ್ ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು, ಈಗಾಗಲೇ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.ಪ್ರಧಾನಮಂತ್ರಿಗಳ ದೃಷ್ಟಿಕೋನದಂತೆ ರೂಪುಗೊಂಡ ಈ ಯೋಜನೆಯು, ವಿದ್ಯಾರ್ಥಿಗಳಲ್ಲಿ ನವೀನತೆ, ಉದ್ಯಮಶೀಲತೆ ಮತ್ತು ನಾವೀನ್ಯತೆ ಮೂಲಕ ಸುತ್ತಲಿನ ಸಮಸ್ಯೆ ಪರಿಹರಿಸುವಂತಹ ಸಾಮರ್ಥ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಪ್ರಸ್ತುತ ಈ ಕಾರ್ಯಕ್ರಮವು ಮೂರನೇ ಆವೃತ್ತಿಯಾಗಿದ್ದು, ದೇಶದಾದ್ಯಂತ 30 ಕೇಂದ್ರಗಳಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ. ವಿಶೇಷವಾಗಿ ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳು, ಲೇಹ್ (ಲಡಾಖ್) ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಕೂಡ ಆಯೋಜನೆಯಾಗುತ್ತಿರುವುದು ವಿಶೇಷವಾಗಿದೆ. ಕರ್ನಾಟಕದಲ್ಲಿ ಕೇವಲ 2 ಕಾಲೇಜುಗಳಲ್ಲಿ ಮಾತ್ರ ಈ ಕಾರ್ಯಕ್ರಮ ನಡೆಯುತ್ತಿದ್ದು, ಅದರಲ್ಲಿ ಜೆ.ಎನ್.ಎನ್.ಸಿ ಕಾಲೇಜು ಕೂಡ ಒಂದು ಎಂಬುದು ಹೆಮ್ಮೆಯ ವಿಷಯವಾಗಿದೆ.
ಕಾರ್ಯಕ್ರಮದಲ್ಲಿ ಸ್ಟಾರ್ಟ್‌ಅಪ್ ತಜ್ಞರು ಮತ್ತು ಉದ್ಯಮಿಗಳಿಂದ ಉಪನ್ಯಾಸ, ಸ್ಥಳೀಯ ಇನೋವೇಶನ್ ಕೇಂದ್ರಗಳಿಗೆ ಭೇಟಿ, ಹಣಕಾಸು, ಅನುದಾನ ಹಾಗೂ ಬೌದ್ಧಿಕ ಸ್ವತ್ತಿನ ಹಕ್ಕುಗಳ ಕುರಿತು ಮಾರ್ಗದರ್ಶನದ ಜೊತೆಗೆ 5 ಉತ್ತಮ ನಾವೀನ್ಯ ಯೋಜನೆಗಳಿಗೆ ಪ್ರಶಂಸಾ ಪತ್ರ ನೀಡಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















