ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ವಿಮಾನ ಸೇವೆಯನ್ನೇ ಮುಂದುವರಿಸಲು ಸಾಧ್ಯವಾಗದಿದ್ದರೆ ವಿಮಾನ ನಿಲ್ದಾಣವನ್ನು (Airport) ಮುಚ್ಚಿ, ಅದಕ್ಕಾಗಿ ಭೂಮಿ ನೀಡಿದ ರೈತರಿಗೆ ಅವರ ಜಮೀನನ್ನು ವಾಪಸ್ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಜನರಿಗೆ ವಿಮಾನ ಸೇವೆಯೂ ಬೇಡ, ವಿಮಾನ ನಿಲ್ದಾಣವೂ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸಾರ್ವಜನಿಕರ ಅನುಕೂಲ ಹಾಗೂ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ರೈತರು ತಮ್ಮ ಅಮೂಲ್ಯವಾದ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೀಡಿದ್ದಾರೆ. ಆದರೆ, ಇದೀಗ ವಿಮಾನ ಹಾರಾಟವೇ ಸ್ಥಗಿತಗೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಮಾನ ಸೇವೆಯನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗದಿದ್ದರೆ ವಿಮಾನ ನಿಲ್ದಾಣವನ್ನು ಮುಚ್ಚಿ, ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅವರಿಗೇ ಹಿಂದಿರುಗಿಸಲಿ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳೇ ಹಾರಾಟ ನಡೆಸದಿದ್ದರೆ ಅದರ ಉದ್ದೇಶವೇನು ಎಂದು ಪ್ರಶ್ನಿಸಿದರು.
ಖಾಸಗಿಯವರಿಗೆ ವಹಿಸುವ ಉದ್ದೇಶವೇ?
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ವಹಿಸಿಕೊಡುವ ಉದ್ದೇಶದಿಂದಲೇ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆಯೇ ಎಂಬ ಅನುಮಾನವೂ ಇದೆ ಎಂದು ಬೇಳೂರು ಹೇಳಿದರು.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಉಡಾನ್ ಯೋಜನೆಯಡಿ ಶಿವಮೊಗ್ಗಕ್ಕೆ ವಿಮಾನ ಹಾರಾಟ ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಲೆನಾಡಿನ ಜನರಿಗೆ ವಿಮಾನಯಾನ ಸೌಲಭ್ಯ ದೊರೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಅಂತಹ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿರುವುದು ಪ್ರಧಾನಿಯವರಿಗೂ ಮುಜುಗರ ಉಂಟುಮಾಡುವ ಸಂಗತಿಯಾಗಿದೆ. ಕನಿಷ್ಠ ಗೌರವದ ದೃಷ್ಟಿಯಿಂದಲಾದರೂ ಸಂಬಂಧಪಟ್ಟ ಸರ್ಕಾರಗಳು ವಿಮಾನ ಸೇವೆ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಕೈಗಾರಿಕಾ ಸಚಿವರು ಭರವಸೆ ನೀಡಿದ್ದಾರೆ. ಮುಂದಿನ ಹಂತದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ವಿಮಾನ ಸೇವೆ ಪುನರಾರಂಭಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.
Shivamogga: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ₹10 ಕೋಟಿ ಅನುದಾನ
ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ತಲಾ ₹16 ಕೋಟಿ ಅನುದಾನ ನೀಡಿದೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಬೇಳೂರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ₹10 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ₹5 ಕೋಟಿ ಬಿಡುಗಡೆಯಾಗಿದ್ದು, ಉಳಿದ ₹5 ಕೋಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಆದರೆ, ಅನುದಾನದ ಕುರಿತು ಹೆಚ್ಚಿನ ಸ್ಪಷ್ಟನೆ ಕೇಳಿದಾಗ ಅವರು ತಕ್ಷಣ ಸಮರ್ಪಕ ಮಾಹಿತಿ ನೀಡಲು ಸಾಧ್ಯವಾಗದೆ, ಈ ಬಗ್ಗೆ ಅಧ್ಯಕ್ಷರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಪೈಲಟ್ಗಳ ಲ್ಯಾಂಡಿಂಗ್ ಮಿತಿ ಹೊಸ ನಿಯಮವೇ ಕಾರಣ: ಮಂಜುನಾಥ ಗೌಡ
ಇದೇ ವೇಳೆ ಶಿವಮೊಗ್ಗ ವಿಮಾನ ಸೇವೆ ಸ್ಥಗಿತಗೊಳ್ಳಲು ಕಾರಣದ ಕುರಿತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನ ಸೇವೆ ಸ್ಥಗಿತಗೊಳ್ಳಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಪೈಲಟ್ಗಳ ಲ್ಯಾಂಡಿಂಗ್ ಮಿತಿಯ ಹೊಸ ನಿಯಮ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಹೊಸ ನಿಯಮದ ಪ್ರಕಾರ ಒಬ್ಬ ಪೈಲಟ್ ದಿನವೊಂದಕ್ಕೆ ಕೇವಲ ಎರಡು ಲ್ಯಾಂಡಿಂಗ್ಗಳನ್ನು ಮಾತ್ರ ನಿರ್ವಹಿಸಬೇಕಾಗಿದೆ. ಬೆಂಗಳೂರು–ಶಿವಮೊಗ್ಗ–ಬೆಂಗಳೂರು ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಿದರೆ ಪೈಲಟ್ನ ಎರಡು ಲ್ಯಾಂಡಿಂಗ್ಗಳು ಅಲ್ಲಿಗೇ ಪೂರ್ಣಗೊಳ್ಳುತ್ತವೆ ಎಂದು ವಿವರಿಸಿದರು.
Also Read>> ಶಿವಮೊಗ್ಗ | ಜ. 23ರಿಂದ ಅಖಿಲ ಕರ್ನಾಟಕ ಬಬ್ಬೂರುಕಮ್ಮೆ ಬ್ರಾಹ್ಮಣ ಮಹಾಸಮ್ಮೇಳನ
ಆದರೆ, ಬೆಂಗಳೂರು–ಜಮ್ಮು ಕಾಶ್ಮೀರದಂತಹ ದೂರದ ಮಾರ್ಗದಲ್ಲಿಯೂ ಎರಡು ಲ್ಯಾಂಡಿಂಗ್ಗಳೇ ಆಗುವುದರಿಂದ ವಿಮಾನಯಾನ ಸಂಸ್ಥೆಗಳು ದೂರದ ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಹತ್ತಿರದ ನಗರಗಳಿಗೆ ವಿಮಾನ ಸೇವೆ ಒದಗಿಸುವುದರಿಂದ ನಿರೀಕ್ಷಿತ ಲಾಭ ದೊರೆಯುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಇಂಡಿಗೋ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಇಂತಹ ಮಾರ್ಗಗಳ ಸೇವೆಯನ್ನು ಸ್ಥಗಿತಗೊಳಿಸುತ್ತಿವೆ ಎಂದು ಹೇಳಿದರು.
ಇದರಿಂದ ಶಿವಮೊಗ್ಗ ಸೇರಿದಂತೆ ಮಲೆನಾಡಿನ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ವಿಮಾನ ಸೇವೆ ಪುನರಾರಂಭಕ್ಕೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









