ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ವಿಮಾನ ನಿಲ್ದಾಣಕ್ಕೆ ಮಹತ್ವದ ಗುಡ್ ನ್ಯೂಸ್ ಸಿಕ್ಕಿದ್ದು, ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯ ಟೆಂಡರ್ ಪಟ್ಟಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ (Airport) ಸೇರ್ಪಡೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ (BY Raghavendra) ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಸತತ ಪ್ರಯತ್ನಗಳ ಫಲವಾಗಿ ಉಡಾನ್ ಯೋಜನೆಯಡಿ ಶಿವಮೊಗ್ಗಕ್ಕೆ ಮತ್ತೊಮ್ಮೆ ಅವಕಾಶ ದೊರೆತಿದೆ. ಉಡಾನ್ 6.0 ಟೆಂಡರ್ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 30 ಅಥವಾ 31 ಕೊನೆಯ ದಿನಾಂಕ ನಿಗದಿಯಾಗಿದೆ. ಈ ಬಾರಿ ಟೆಂಡರ್ನಲ್ಲಿ ಯಾವುದೇ ನಿರ್ದಿಷ್ಟ ವಿಮಾನಯಾನ ಮಾರ್ಗಗಳನ್ನು ನಿಗದಿಪಡಿಸಿಲ್ಲ. ಕಾರ್ಯಸಾಧ್ಯತೆ ಸಮೀಕ್ಷೆಯ ಆಧಾರದ ಮೇಲೆ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
Shivamogga : ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ನೆರವು ನೀಡಬೇಕು
ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಫೆಬ್ರವರಿ ಅಥವಾ ಮಾರ್ಚ್ವರೆಗೆ ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು. ಈ ಮಧ್ಯಂತರ ಅವಧಿಯಲ್ಲಿ ವಿಮಾನಯಾನ ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ನೆರವು ನೀಡಬೇಕು. ಶಿವಮೊಗ್ಗ–ಬೆಂಗಳೂರು ಅಥವಾ ಶಿವಮೊಗ್ಗ–ಹೈದರಾಬಾದ್ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಿಮಾನ ಹಾರಾಟ ನಡೆಸಲು ರಾಜ್ಯ ಸರ್ಕಾರವು ವಿಜಿಎಫ್ (VGF) ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಹಿಂದಿನ ಬಾರಿಯಂತೆ ಈ ಬಾರಿ ಯಾವುದೇ ಕಮರ್ಷಿಯಲ್ ಬ್ರೇಕ್ ಇಲ್ಲದೆ, ಅಡೆತಡೆಯಿಲ್ಲದೆ ಮುಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಪರಿಗಣನೆಯಾಗಿರುವುದು ಸಂತಸದ ವಿಚಾರ. ಟೆಂಡರ್ನಲ್ಲಿ ಭಾಗವಹಿಸುವಂತೆ ಈಗಾಗಲೇ ಎರಡರಿಂದ ಮೂರು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಅಪ್ಪರ್ ಭದ್ರಾ ನೀರು ಹರಿಯುತ್ತಿರುವುದು ಬಿಜೆಪಿ ಸರ್ಕಾರದ ಕೊಡುಗೆ
ಹಿರಿಯೂರು ಕೆನಾಲ್ನಲ್ಲಿ ಅಪ್ಪರ್ ಭದ್ರಾ ಯೋಜನೆಯ ನೀರು ಹರಿಯುತ್ತಿರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಿಶ್ರಮ ಮತ್ತು ಅನುದಾನವೇ ಕಾರಣ. ಇಂದಿನ ಬರಗಾಲದ ನಡುವೆಯೂ ಆ ಭಾಗಕ್ಕೆ ನೀರು ತಲುಪುತ್ತಿರುವುದು ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಈ ವಿಚಾರವನ್ನು ಜನರಿಗೆ ತಿಳಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಹೇಳಿದರು.
Also Read>> ಉಡುಪಿ | ಕಾಪು ಬೀಚಲ್ಲಿ ದುರಂತ! ಅಲೆಗಳ ಅಬ್ಬರಕ್ಕೆ ಶಿವಮೊಗ್ಗದ ಯುವಕ ಬಲಿ, ಇಬ್ಬರು ನಾಪತ್ತೆ
ಎನ್ಡಿಎ ಅಭ್ಯರ್ಥಿ ಗೆಲ್ಲಿಸಲು ಒಗ್ಗಟ್ಟಿನ ಪ್ರಯತ್ನ
ಮುಂದಿನ ಚುನಾವಣೆಯಲ್ಲಿ ಎನ್ಡಿಎ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ನೂರಕ್ಕೆ ನೂರು ಶಾಸಕರನ್ನು ಗೆಲ್ಲಿಸಿಕೊಂಡು ಬರುವಂತಹ ವಾತಾವರಣ ರಾಜ್ಯದಲ್ಲಿದೆ. ಅಭ್ಯರ್ಥಿ ಘೋಷಣೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ರಾಜ್ಯದ ಬಿಜೆಪಿ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೂ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದಂತೆ ಯಾರಿಗೇ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









