ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೃತ್ತಿ ಜೀವನದಲ್ಲಿ ಗಳಿಸುವ ಯಶಸ್ಸಿಗಿಂತ, ಪಾರಿವಾರಿಕವಾಗಿ ಬೌದ್ಧಿಕ ಹಾಗೂ ಮಾನಸಿಕ ಮಟ್ಟದಲ್ಲಿ ಸಹಬಾಳ್ವೆಯೊಂದಿಗೆ ಜೀವಿಸುವುದೇ ನಿಜವಾದ ಯಶಸ್ಸು ಎಂದು ಬೆಂಗಳೂರಿನ ದಯಾನಂದ ಸಾಗರ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎನ್. ಬಾಲಸುಬ್ರಹ್ಮಣ್ಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ 13ನೇ ಬ್ಯಾಚ್ ನ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗದ ವಿದ್ಯಾರ್ಥಿ ವೃಂದದ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿಯನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿ ಮುಂದಿನ ತಮ್ಮ ಭವ್ಯ ಭವಿತವ್ಯದ ಜೀವನವನ್ನು ರೂಪಿಸುವಲ್ಲಿ ತೀಕ್ಷ್ಣವಾದ ಹಾಗೂ ಕೌಶಲ್ಯ ಭರಿತ ಆಲೋಚನಾ ಲಹರಿಯನ್ನು ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಕಾರ್ಯತತ್ಪರರಾಗಬೇಕೆಂದು ಮನಮುಟ್ಟುವಂತೆ ಹಲವು ಪುಸ್ತಕಗಳ ಹಾಗೂ ಪ್ರಾಯೋಗಿಕ ಉದಾಹರಣೆಗಳ ಸಮೇತ ತಿಳಿಸಿದರು.
Also read: ಕಾಂಗ್ರೆಸ್ 3ನೆಯ ಪಟ್ಟಿ: ಶಿವಮೊಗ್ಗಕ್ಕೆ ಯೋಗೀಶ್, ಗ್ರಾಮಾಂತರಕ್ಕೆ ಶ್ರೀನಿವಾಸ್ ಕರಿಯಣ್ಣ
ಯಶಸ್ಸು ಎನ್ನುವುದು ಅವರವರ ಬುದ್ಧಿಮತ್ತೆಗೆ ಹಲವು ರೀತಿಯ ವಿವರಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕವಾಗಿ ಹಾಗೂ ದೇಶಕ್ಕೆ, ಪೋಷಕರಿಗೆ ಅನ್ಹೂಯವಾದ ಅನುಭವವನ್ನು ನೀಡುವಲ್ಲಿ ಶ್ರಮಿಸುವಂತೆ ಪ್ರಯತ್ನಿಸುವುದೇ ಅತ್ಯುತ್ತಮ ವಿವರಣೆಗಳಲ್ಲಿ ಒಂದು. ತಮ್ಮ ಕಾರ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಪ್ರಾಯೋಗಿಕ ಮಟ್ಟದಲ್ಲಿ ಪ್ರಚುರಪಡಿಸಲು ಅತ್ಯವಶ್ಯವಿರುವ ಪ್ರಾಯೋಗಿಕ ಜ್ಞಾನಾರ್ಜನೆಯನ್ನು ಪಡೆದುಕೊಳ್ಳುವತ್ತ ಚಿತ್ತವನ್ನು ಕೇಂದ್ರೀಕರಿಸುವಂತೆ ಸೂಚಿಸಿದರು.
ಆಲ್ಬರ್ಟ್ ಐನ್ಸ್ಟೀನ್ ವಿಜ್ಞಾನಿಯ ಒಂದು ಹೇಳಿಕೆಯನ್ನು ಸೂಚಿಸುತ್ತ, ಕಾಲಮಾನಕ್ಕೆ ತಕ್ಕಂತೆ ಒಂದು ಸಮಸ್ಯೆ ಅಥವಾ ವಿಚಾರಕ್ಕೆ ಅನುಗುಣವಾಗಿ ನಮ್ಮೆಲ್ಲರ ಪರಿಹಾರಾತ್ಮಕ ಆಲೋಚನಾ ಪರಿಯನ್ನು ಬದಲಿಸುವಲ್ಲಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಸ್ಥೈರ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
13ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗದ ಪಿಇಎಸ್ ಟ್ರಸ್ಟ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ವೈ. ಉಮಾದೇವಿ ಮಾತನಾಡಿ, ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿಯನ್ನು ಸಂಪೂರ್ಣಗೊಳಿಸುತ್ತಿರುವ ಈ ಕ್ಷಣದಲ್ಲಿ ತಮ್ಮ ಜೀವನ ಪಯಣದಲ್ಲಿ ಪ್ರತ್ಯಕ್ಷವಾಗಿ ಹಲವಾರು ರೀತಿಯ ತ್ಯಾಗಗಳನ್ನು ಮಾಡಿದ ದೈವ ಸ್ವರೂಪಿ ಪೋಷಕರನ್ನು ತುಂಬು ಹೃದಯದಿಂದ ಸ್ಮರಿಸುವಂತೆ ವಿದ್ಯಾರ್ಥಿ ವೃಂದಕ್ಕೆ ಸೂಚಿಸಿದರು.
ಯಶಸ್ಸು ಎಂಬುದು ಜೀವನದಲ್ಲಿ ಹಲವಾರು ರೀತಿಯ ತ್ಯಾಗಗಳನ್ನು ನಿರೀಕ್ಷಿಸುತ್ತದೆ ಹಾಗೂ ಅದರ ಫಲಶ್ರುತಿಯೇ ಒಂದು ಸುಂದರ ಭವ್ಯ ಜೀವನದ ರೂಪಿಸುವಿಕೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂಬುದನ್ನು ಹಲವಾರು ಪ್ರಾಯೋಗಿಕ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಇಂಜಿನಿಯರಿಂಗ್ ಹಾಗೂ ಎಂಬಿಎ ವಿಭಾಗದ ಒಟ್ಟಾರೆ 520 ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರದಾನ ಮಾಡಲಾಯಿತು. ಶೈಕ್ಷಣಿಕ ಕಾರ್ಯ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಅಗ್ರ ಶ್ರೇಣಿಯ ವಿದ್ಯಾರ್ಥಿಗಳನ್ನು ಡಾ.ಕೆ.ಎನ್. ಬಾಲಸುಬ್ರಮಣ್ಯ ಮೂರ್ತಿ ಮತ್ತು ಶ್ರೀಮತಿ ಎಸ್.ವೈ. ಉಮಾದೇವಿ ಸನ್ಮಾನಿಸಿದರು. ಈ ಸಮಾರಂಭದಲ್ಲಿ ಎಂಬಿಎ ವಿಭಾಗದ 60 ವಿದ್ಯಾರ್ಥಿಗಳು ಹಾಗೂ ಇಂಜಿನಿಯರಿಂಗ್ ನ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಮತ್ತು ಕಮ್ಯುನಿಕೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಸಿವಿಲ್ ವಿಭಾಗದ 460 ವಿದ್ಯಾರ್ಥಿಗಳಿಗೆ ಆಯಾ ವಿಭಾಗಗಳ ಮುಖ್ಯಸ್ಥರಿಂದ ಪದವಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಯಿತು.
ಪಿಇಎಸ್ಐಟಿಎಂನ ಪ್ರಾಂಶುಪಾಲರಾದ ಡಾ. ಚೈತನ್ಯಕುಮಾರ್ ಎಂ.ವಿ. ಉಪಸ್ಥಿತರಿದ್ದ ವಿದ್ಯಾರ್ಥಿ ವೃಂದಕ್ಕೆ ಪ್ರಮಾಣವಚನ ಬೋಧಿಸಿದರು. ಕಾಲೇಜಿನ ಇನ್ಫರ್ಮೇಷನ್ ಸೈನ್ಸ್ ವಿಭಾಗದ ಆರನೇ ಸೆಮಿಸ್ಟರ್ ನ ವಿದ್ಯಾರ್ಥಿನಿ ಕುಮಾರಿ ಸುನಿಧಿ ಪ್ರಾರ್ಥಿಸಿದರು. ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post