ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನುಷ್ಯನ ದೇಹ ಒಂದು ವಿಶೇಷವಾದ ಸೃಷ್ಟಿ. ಈ ದೇಹದ ಅಂಗಾಂಗಗಳು ಹಾಗೂ ಅದರ ಕಾರ್ಯ ವೈಖರಿ ವಿಶೇಷವಾದುದು. ಇಂತಹ ವಿಶೇಷ ಸೃಷ್ಟಿಯ ಅಂಗಾಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #Dr. Dhananjaya Sarji ಹೇಳಿದರು.
ಮಂಡಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಚಿಕೊಪ್ಪ ಗ್ರಾಮದಲ್ಲಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಾರ್ಷಿಕ ವಿಶೇಷ ಗ್ರಾಮೀಣ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಆಹಾರ ಸೇವನೆಯಲ್ಲಿ ಪೌಷ್ಟಿಕ ಆಹಾರ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇದಕ್ಕಿರುವ ಸರಳ ಸೂತ್ರವೆಂದರೆ ನಮ್ಮ ಊಟದ ತಟ್ಟೆಯನ್ನು ತಿರುಗಿಸಿ ಇಡುವುದು. ಅಂದರೆ ನಾವು ಮುಖ್ಯ ಆಹಾರ ಎಂದುಕೊಂಡಿರುವ ಅನ್ನ, ರೊಟ್ಟಿ, ದೋಸೆ ಇತ್ಯಾದಿಯನ್ನು ಕಡಿಮೆ ಪ್ರಮಾಣದಲ್ಲಿಯೂ ತಟ್ಟೆಯ ಬದಿಯಲ್ಲಿರುವ ಪಲ್ಯ ತರಕಾರಿ ಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿಯೂ ಸೇವಿಸಬೇಕು. ಇದಲ್ಲದೆ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಸೇವಿಸುವುದು ಮುಖ್ಯ. ಶ್ವಾಸಕೋಶದ ಆರೋಗ್ಯಕ್ಕೆ ದೀರ್ಘ ಉಸಿರಾಟ ಬಹಳ ಮುಖ್ಯ ಎಂದು ಹಲವಾರು ಉದಾಹರಣೆಗಳ ಮೂಲಕ ಈ ಮೂರು ಸೂತ್ರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು.

ತಾನು ಸ್ವತಃ ಒಬ್ಬ ಪ್ರಸಿದ್ಧ ವೈದ್ಯನಾಗಬೇಕೆಂದು ಮತ್ತು ಜನಪರ ವ್ಯಕ್ತಿಯಾಗಬೇಕೆಂದು ಕಂಡಿದ್ದ ಕನಸು ನನಸಾಗುತ್ತಿದೆ ಹಾಗೂ ಹಾಗೂ ನನ್ನ ಕನಸನ್ನು ನನಸಾಗಿಸುವಲ್ಲಿ ತನ್ನ ಪ್ರಯತ್ನ ಹಾಗೂ ಶ್ರಮ ಮತ್ತು ಎಲ್ಲರ ಬೆಂಬಲ ಕಾರಣ ಎಂದು ತಿಳಿಸಿದರು.
Also read: ಯಶಸ್ವಿ ನೃತ್ಯ ಸಂಭ್ರಮ | ಕಲೆಯ ಅವಿಸ್ಮರಣೀಯ ಪ್ರದರ್ಶನ
ಡಾ .ಅಶೋಕ್ ಪೈರವರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದರು ಹಾಗೂ ಸರಳವಾಗಿ ಜೀವನವನ್ನು ನಡೆಸಿದರು. ಅದರಂತೆಯೇ ಮಾನಸ ಸಂಸ್ಥೆ ಅತ್ಯಂತ ದೊಡ್ಡ ಸಂಸ್ಥೆಯಾದರೂ ಅಲ್ಲಿರುವ ವೈದ್ಯರೆಲ್ಲರೂ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಆದುದರಿಂದ ಇಂದಿನ ಯುವಕ ಯುವತಿಯರು ಸಾಧನೆಯನ್ನು ಮಾಡಬೇಕು ಹಾಗೆಯೇ ಸರಳತೆಯನ್ನು ಪಾಲಿಸಬೇಕು. ಎಷ್ಟು ದೊಡ್ಡವರಾದರು ಅಥವಾ ಧನಿಕರಾದರು ಪರೋಪಕಾರವನ್ನು ಮರೆಯಬಾರದು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡುತ್ತಾ ಡಾ. ಧನಂಜಯ ಸರ್ಜಿ ವೈದ್ಯರಾಗಿ ಹಾಗೂ ಜನ ಪ್ರತಿನಿಧಿಯಾಗಿ ಒಬ್ಬ ಮಾದರಿ ವ್ಯಕ್ತಿಯಾಗಿ ಇದ್ದಾರೆ. ತಮಗೆ ಗೊತ್ತಿರುವ ಮಾಹಿತಿಯನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಅವರ ಸಾಮರ್ಥ್ಯ ಅತ್ಯಂತ ವಿಶೇಷವಾದದು. ಡಾ. ಧನಂಜಯ ಸರ್ಜಿ ಅವರು ತಮ್ಮ ಜನಪರ ಕೆಲಸಗಳಿಂದಲೇ ಜನಪ್ರತಿನಿಧಿಯಾದ ವಿಶೇಷ ರಾಜಕಾರಣಿ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಕು. ಮಂಜುಳಾ ನಿರ್ವಹಿಸಿದರು. ಕು. ತನ್ಮಯಿ ಪ್ರಾರ್ಥನೆಯನ್ನು ಹಾಡಿದರು. ಕು. ಸಂಗೀತ ಎಲ್ಲರನ್ನು ವಂದಿಸಿದರು. ಈ ದಿನದ ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗು ದಂತ ವೈದ್ಯಕೀಯ ಮಹಾವಿದ್ಯಾಲಯದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆರೋಗ್ಯದ ಮಹತ್ವವನ್ನು ಶಿಬಿರಾರ್ಥಿಗಳು ಸಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post