ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಲೀಗ್ ಪಂದ್ಯಾವಳಿಯೂ ಈಗ ರೋಚಕ ಘಟ್ಟಕ್ಕೆ ಕಾಲಿಟ್ಟಿದೆ. ಜೂನ್ 24 ರಿಂದ ಶುರುವಾದ ಈ ಪಂದ್ಯಾವಳಿಗೆ ಇಂದು ಸಂಜೆ ತೆರೆ ಬೀಳುತ್ತಿದೆ. ಮಧ್ಯಾಹ್ನ 4.30ಕ್ಕೆ ಪಂದ್ಯಾವಳಿಯ ಫೈನಲ್ ಕದನ ನಡೆಯಲಿದೆ.
ನೆನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರೋಚಕ ಆಟ ಪ್ರದರ್ಶಿಸಿ, ದಯಾ ಫ್ರೆಂಡ್ಸ್ ಮತ್ತು ಮಲ್ನಾಡ್ ಕಿಕರ್ಸ್ ಕ್ಲಬ್ ಗಳು ಫೈನಲ್ ತಲುಪಿವೆ. ಇವರೆಡು ತಂಡಗಳು ಅನುಭವಿ ಆಟಗಾರರನ್ನು ಹೊಂದುವ ಮೂಲಕ ಬಲಿಷ್ಟ ತಂಡಗಳೇ ಆಗಿದ್ದು, ಇವರಿಬ್ಬರಲ್ಲಿ ಗೆಲುವು ಯಾರದು ಎನ್ನುವುದು ಭಾರೀ ಕುತೂಹಲ ಹುಟ್ಟಿಸಿದೆ.
ಸೆಮಿಫೈನಲ್‍ನಲ್ಲಿ ನಿನ್ನೆ ದಯಾ ಫ್ರೆಂಡ್ಸ್ ಕ್ಲಬ್ ಮತ್ತು ಜಾನ್ ಮನ್ರೋಜ್ ಕ್ಲಬ್‍ಗಳು ಮುಖಾಮುಖಿ ಆಗಿದ್ದವು. ಎರಡು ತಂಡಗಳು ಅನುಭವಿ ಆಟಗಾರರನ್ನೇ ಹೊಂದಿದ್ದ ಕಾರಣಕ್ಕೆ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತಾದರೂ, ದಯಾ ಫ್ರೆಂಡ್ಸ್ ನ ಆಕ್ರಮಣಕಾರಿ ಆಟದ ಮುಂದೆ ಜಾನ್ ಮನ್ರೋಜ್ ಆಟಗಾರರ ಕಾಲ್ಚೆಳಕ ನಡೆಯಲಿಲ್ಲ. ದಯಾ ಫ್ರೆಂಡ್ಸ್ ಬಿರುಸಿನ ಆಟಕ್ಕೆ ಜಾನ್ ಮನ್ರೋಜ್ ತಂಡವು ತತ್ತರಿಸ ಹೋಯಿತು. ದಯಾ ಫ್ರೆಂಡ್ಸ್ ಆಟಗಾರರ ಹುರುಪು, ಚತುರತೆ, ವೇಗದ ಮುಂದೆ ಜಾನ್ ಮನ್ರೋಜ್ ವಿಚಿತವಾಗಿದ್ದು, ದಯಾ ಫ್ರೆಂಡ್ಸ್ ಗೆ ಭರ್ಜರಿ ಗೋಲುಗಳು ಸಿಗುವಂತಾಯಿತು.
ದಯಾ ಫ್ರೆಂಡ್ಸ್ ಪರವಾಗಿ ಜಿಂಕೆ ಓಟದ ಆಟಗಾರ ಸಿರಾಜ್ 3 ಗೋಲು ಪಡೆದರೆ, ನಿರಂಜನ್ ಮತ್ತು ಮನೀಶ್ ಹಾಗೂ ಸುನೀಲ್ ತಲಾ ಒಂದು ಗೋಲು ಸಂಪಾದಿಸಿ ಕೊಳ್ಳುವಲ್ಲಿ ಯಶಸ್ವಿಯಾದರು. ಜಾನ್ ಮನ್ರೋಜ್ ವಿರುದ್ದ ದಯಾ ಫ್ರೆಂಡ್ಸ್ ಒಟ್ಟು 7 ಗೋಲುಗಳನ್ನು ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅದರ ಜಯದ ಹಾದಿ ಸುಗಮ ಗೊಳಿಸಿತು. ಪಂದ್ಯದ ಮುಕ್ತಾಯದ ಹೊತ್ತಿಗೆ ಜಾನ್ ಮನ್ರೋಜ್ ಯಾವುದೇ ಗೋಲು ಗಳಿಸದೆ ಹೊರ ಬಿತ್ತು. ಇದರಿಂದ ದಯಾ ಫ್ರೆಂಡ್ಸ್ ಕ್ಲಬ್ ಸುಲಭವಾಗಿ ಫೈನಲ್ ಪ್ರವೇಶಿಸಿತು.
ಇನ್ನು ಸೆಮಿ ಫೈನಲ್ ನ ಎರಡನೇ ಪಂದ್ಯದಲ್ಲಿ ಮಲ್ನಾಡ್ ಕಿಕರ್ಸ್ ಮತ್ತು ನೋವಾ ಎಫ್ ಸಿ ನಡುವೆ ಫೈನಲ್ ಪ್ರವೇಶಕ್ಕಾಗಿ ಕಾದಾಟ ನಡೆಯಿತು. ಆರಂಭದಿಂದಲೇ ತುಂಬಾ ರೋಚಕವಾಗಿದ್ದ ಈ ಆಟದಲ್ಲಿ ಮಲ್ನಾಡ್ ಕಿಕರ್ಸ್ ತುಂಬಾ ಚಾಣಕ್ಷತೆಯ ಆಕ್ರಮಣಕಾರಿ ಆಟ ಪ್ರದರ್ಶಿಸಿ, ಮೂರು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಆರಂಭದಿಂದ ಅಂತ್ಯದವರೆಗೂ ನೋವಾ ಎಫ್ ಸಿ ಗೋಲು ಗಳಿಸಲು ಹಲವು ಪ್ರಯತ್ನ ನಡೆಸಿತ್ತಾದರೂ, ಅದರ ಯಾವುದೇ ಪ್ರಯತ್ನವೂ ಫಲ ನೀಡಲಿಲ್ಲ. ಅದರ ಪರಿಣಾಮ ಯಾವುದೇ ಗೋಲು ಇಲ್ಲದೆ, ನೋವಾ ಎಫ್ ಸಿ ಸೋಲು ಅನುಭವಿಸಿ, ಮಲ್ನಾಡ್ ಗೆ ಜಯ ಬಿಟ್ಟು ಕೊಡುವುದರ ಮೂಲಕ ಫೈನಲ್ ಗೆ ಶುಭಾಶಯ ಕೋರಿತು.
ಸೆಮಿಫೈನಲ್ ನ ಎರೆಡನೇ ಪಂದ್ಯದಲ್ಲಿ ಮಲ್ನಾಡ್ ಕಿಕರ್ಸ್ ಮತ್ತು ನೋವಾ ಎಫ್ ಸಿ ಮುಖಾಮುಖಿಯಾಗುವ ಸಂದರ್ಭದಲ್ಲಿ ಎಚ್ಚರಿಕೆ ಪತ್ರಿಕೆ ಸಂಪಾದಕ ವೈ.ಕೆ. ಸೂರ್ಯನಾರಾಯಣ, ಅಬ್ಬಲಗೆರೆ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಎರಡು ತಂಡಗಳ ಆಟಗಾರರಿಗೆ ಅವರು ಹಸ್ತಲಾಘವ ನೀಡುವ ಮೂಲಕ ಶುಭ ಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post