ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರಣ್ಯ ಮತ್ತು ಕಂದಾಯ ಇಲಾಖೆಗಳು ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಾಡದಿರುವುದರಿಂದ ಬರೊಬ್ಬರಿ 600 ಎಕರೆ ಅರಣ್ಯ ಭೂಮಿ ಖಾಸಗಿಯವರ ಪಾಲಾಗಿ ಅಪಾರ ಪ್ರಮಾಣದ ಸಸ್ಯ ಜೀವ ಸಂಕುಲಗಳ ಮಾರಣ ಹೋಮವಾಗುವುದನ್ನು ತಪ್ಪಿಸಬೇಕು ಎಂದು ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ಸೇರಿದಂತೆ ವಿವಿಧ ಪರಿಸರ ಸಂಘಟಕರು ಅರಣ್ಯ ಸಚಿವರಿಗೆ ಮನವಿ ಮಾಡಿದರು.
ಶರಾವತಿ ಕಣಿವೆಯ ಪ್ರಮುಖ ಭಾಗವಾದ ಹೊಸನಗರ ಸಮೀಪದ ತೋಟದಕೊಪ್ಪ ಮರ್ತೂರ, ಬಸವಾಪುರ ಹಳ್ಳಿಗಳ ಸುಮಾರು 600 ಎಕರೆ ನೈಸರ್ಗಿಕ, ಪಾರಂಪರಿಕ ಕಾಡು ಒಂದಾಣಿ ಕಾನು, ಖಾತೆ ಕಾನು ಹೆಸರಲ್ಲಿ 60 ವರ್ಷ ಹಿಂದೆಯೇ ಸೇರ್ಪಡೆ ಆಗಿದ್ದರೂ ಖಾಸಗಿ ವ್ಯಕ್ತಿಗಳು ಈ ಖಾತೆ ಕಾನು ಅರಣ್ಯಗಳ ಮರ ಕಟಾವಿಗೆ ಪ್ರಯತ್ನ ನಡೆಸುತ್ತಿರುವುದು ಆತಂಕಕಾರಿ ಸಂಗತಿ. ಈ ಹಿಂದೆ 2015 ರಲ್ಲಿ ವ್ಯಕ್ತಲಕ್ಷ ಆಂದೋಲನ ಕಾರ್ಯಕರ್ತರು ಈ ಬಗ್ಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗಳ ಗಮನ ಸೆಳೆದಿದ್ದರು. ಪಶ್ಚಿಮ ಘಟ್ಟದ ನದಿ, ಜೀವವೈವಿಧ್ಯ ಆವಾಸಕ್ಕೆ ತೀವ್ರತರವಾದ ನಷ್ಟ ಸಂಭವಿಸಲಿದ್ದು ದ್ವಂಸ ತಡೆಗೆ ಒತ್ತಾಯಿಸಿದ್ದರು.
ಕಂದಾಯ, ಅರಣ್ಯ ಈ ಎರಡು ಇಲಾಖೆಗಳ ಸಮನ್ವಯದ ಕೊರತೆಯಿಂದ ಅರಣ್ಯ ಪ್ರಕರಣಗಳಲ್ಲಿ ಖಾಸಗಿಯವರೆ ನ್ಯಾಯಾಲಯದಲ್ಲಿ ಜಯಗಳಿಸುತ್ತಿರುವುದು ಖೇದಕರ ಸಂಗತಿ. 10 ವರ್ಷಗಳ ಹಿಂದೆ ಅರಣ್ಯ, ಇಲಾಖೆಗೆ ತೋಟದಕೊಪ್ಪ ಕಾನು ಅರಣ್ಯ ಭೂಮಿ ಕಂದಾಯ ಇಲಾಖೆಯಿಂದ ವರ್ಗಾವಣೆ ಆಗಿದೆ. ಈ ಮಹತ್ವದ ದಾಖಲೆ ನ್ಯಾಯಾಲಯಕ್ಕೆ ನೀಡದೇ ಇರುವುದರಿಂದ ಖಾಸಗಿಯವರ ಪರವಾಗಿ ನ್ಯಾಯಾಲಯ ಆದೇಶ ಮಾಡಿದೆ ಎಂದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ 10 ಪ್ರಕರಣಗಳವೆ. ಸುಮಾರು 5000 ಎಕರೆ ಅರಣ್ಯ ಭೂಮಿ ಈ ಪ್ರಕರಣಗಳಲ್ಲಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಗಂಟೆ ಕೊಪ್ಪ ಮತ್ತು ಯಡೂರು, ತೀರ್ಥಹಳ್ಳಿ ತಾಲ್ಲೂಕಿನ ಹಲವನಹಳ್ಳಿ, ಹಗಲತ್ತಿ, ಮಳಲಿ ಅರಣ್ಯಗಳೂ ಉನ್ನತ ನ್ಯಾಯಾಲಯಗಳಲ್ಲವೆ. ಇವೆಲ್ಲವೂ ಖಾಸಗಿಯವರ ಪಾಲಾಗಲಿದೆಯೇ? ఎంబ ಆತಂಕ ಪರಿಸರ ಕಾರ್ಯಕರ್ತರದ್ದಾಗಿದೆ. ತೋಟದಕೊಪ್ಪ ಕಾನು ಅರಣ್ಯ ಗಳಿಗೆ ರಕ್ಷಣಾ ಕವಚ, ಕಂದಕ ನಿರ್ಮಾಣದ ಬೇಟೆ ತಡೆಗೆ ನಾಮಫಲಕ ಹಾಕಿತ್ತು. ಆದಾಗ್ಯೂ ಸಮರ್ಪಕ ದಾಖಲೆ ಒದಗಿಸದೆ ಅರಣ್ಯ ನಾಶವಾಗಲಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಶಿವಮೊಗ್ಗಕ್ಕೆ ಬರಬೇಕು. ಸ್ಥಳ ಪರಿಶೀಲನೆ, ಪ್ರಕರಣಗಳ ಬಗ್ಗೆ ಸ್ಥಳ ಮಾಹಿತಿ, ಕಾಯಿದ ಅಂಶಗಳ ಬಗ್ಗೆ ಕಂದಾಯ ಇಲಾಖೆ ಜೊತೆ ಸಮಾಲೋಚನೆ ನಡೆಸಬೇಕು ಎಂದು ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಹಾಗೂ ಪರಿಸರಾಸಕ್ತರು ಆಗ್ರಹಿಸಿದ್ದಾರೆ.
ಪಶ್ಚಿಮ ಘಟ್ಟ ಆಂದೋಲನದ ಅಧ್ಯಕ್ಷ ಬಿ.ಎಂ. ಕುಮಾರಸ್ವಾಮಿ, ವೃಕ್ಷಲಕ್ಷ ಆಂದೋಲನದ ಸಂಚಾಲಕ ಕವಲಕೋಡ ವೆಂಕಟೇಶ, ಹೊಸನಗರ ವೃಕ್ಷಲಕ್ಷ ವೇದಿಕೆಯ ಸುಬ್ರಹ್ಮಣ್ಯ, ವನ್ಯಜೀವಿ ಅಧ್ಯಯನಕಾರ ಡಾ. – ಬಾಲಚಂದ್ರ ಸಾಯಿಮನೆ, ಪರಿಸರ ವಿಜ್ಞಾನಿ ಡಾ. ಕೇಶವ ಎಚ್. ಕೊರ್ಸೆ, ಶ್ರೀಪಾದ ಚಿಚ್ಚುಗತ್ತಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿ ಈ ಆಸ್ತಿ ಉಳಿಸಿಕೊಳ್ಳುವಂತೆ ಕೋರಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post