ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೀವು ಪಡೆದಿರುವ ಸಿಇಟಿ ರ‍್ಯಾಂಕ್, ಸ್ಥಳ ಇವೆಲ್ಲವನ್ನೂ ಮರೆತು ನಿಮ್ಮ ಸಮಯವನ್ನು ಕಲಿಕೆಗಾಗಿ ನಿಯೋಗಿಸಿ ಎಂದು ಧಾರವಾಡದ ಐಐಟಿಯ ನಿರ್ದೇಶಕ ಡಾ.ಮಹಾದೇವ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಿಇಎಸ್’ಐಟಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 19ನೇ ಬ್ಯಾಚ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಹಾಗೂ ಶಿಷ್ಯೋಪನಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ಒಂದು ದಶಕದ ಅವಧಿಯಲ್ಲಿ ಎಐ ಜಾಗತಿಕವಾಗಿ ಪರಿಣಾಮ ಬೀರಿದೆ. ಉದ್ಯೋಗಾವಕಾಶಗಳ ಮೇಲೆಯೂ ಕೂಡ ಇದು ತನ್ನ ಪ್ರಭಾವವನ್ನು ಬೀರಿದೆ. ಕಳೆದ ನಾಲ್ಕು ದಶಕದಲ್ಲಿ ನಾವು ಕಂಪ್ಯೂಟರ್ ಹಿಂದೆ ಬಿದ್ದಿದ್ದೇವೆ. ಇಂಜಿನಿಯರ್‌ಗಳು ದೇಶದ ನಿರ್ಮಾತೃಗಳು. ಈಗಿನ ಅನಿಶ್ಚಿತತೆಯನ್ನು ಅವಕಾಶಗಳಾಗಿ ಬಳಸಿಕೊಳ್ಳಿ. ಪದ, ಉದ್ಯೋಗದ ಜೊತೆಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.ಶೈಕ್ಷಣಿಕ ಜೀವನವು ಕೂಡ ಮತ್ತೊಂದು ಸಂಶೋಧನಾ ವಲಯ ಇದ್ದಂತೆ ಈ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಈಗ ಮಾಹಿತಿ ಎಲ್ಲರ ಕೈಯಲ್ಲಿದೆ. ಎಲ್ಲಾ ಸಿಲಬಸ್ ಹೇಳಿಕೊಡಬೇಕಿಲ್ಲ. ಮಾರ್ಗದರ್ಶನ ಮಾಡಿದರೆ ಸಾಕು. ಒಂದು ಪ್ರವೇಶ ಪರೀಕ್ಷೆ ವಿದ್ಯಾರ್ಥಿಗಳ ಎಲ್ಲಾ ಅಂಶಗಳನ್ನು ಹೊರ ಹಾಕುವುದಿಲ್ಲ ಕಸಿತ ಭಾರತ ನಿರ್ಮಾಣ ನಿಮ್ಮ ಕೈಯಲ್ಲಿ ಇದೆ. ಅಲ್ಲದೆ ಯೋಚನೆ ನಿಮ್ಮ ಮಾತೃಭಾಷೆಯಲ್ಲಿ ಇರಲಿ. ಸಂವಹನ ಮಾಡಲು ಮಾತ್ರ ಇಂಗ್ಲೀಷ್ ಅಗತ್ಯ. ನೀವು ಪಡೆದಿರುವ ಸಿಇಟಿ ರ‍್ಯಾಂಕ್, ಸ್ಥಳ ಇವೆಲ್ಲವನ್ನೂ ಮರೆತು ನಿಮ್ಮ ಸಮಯವನ್ನು ಕಲಿಕೆಗಾಗಿ ನಿಯೋಗಿಸಿ ಎಂದು ಸಲಹೆ ನೀಡಿದರು.
ಪಿಇಎಸ್ ಟ್ರಸ್ಟ್ ಟ್ರಸ್ಟಿ ಹಾಗೂ ಜನಶಿಕ್ಷಣ ಸಂಸ್ಥಾನದ ನಿರ್ದೇಶಕರಾದ ಎಸ್.ವೈ. ಅರುಣಾದೇವಿ ಮಾತನಾಡಿ, ಬದುಕಿನಲ್ಲಿ ಅಂಕಗಳಷ್ಟೇ ಬದುಕಿನ ಮಾನದಂಡಗಳಲ್ಲ. ಉತ್ತಮ ಸಂಸ್ಕಾರ ಮತ್ತು ದೇಶ ನಿರ್ಮಾಣದ ಸಂಕಲ್ಪವೂ ಸಹ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದಿರಿ. ಉತ್ತಮವಾದ ಶಿಕ್ಷಣವನ್ನು ಪಡೆದು ಅತ್ಯುತ್ತಮ ಸಾಧನೆಯ ಮೂಲಕ ನಿಮ್ಮ ತಂದೆ ತಾಯಿ ಹಾಗೂ ಶಿಕ್ಷಣ ಸಂಸ್ಥೆಗೆ ಗೌರವ ತರುವ ಕೆಲಸವನ್ನು ಮಾಡಿ ಎಂದರು.
ನಿಮ್ಮ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಸಾಧನೆ ಸಾಧ್ಯ. ಆದ್ದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ. ಸರ್.ಎಂ. ವಿಶ್ವೇಶ್ವರಯ್ಯನವರ ಸಾಧನೆ ನಿಮ್ಮ ಬದುಕಿಗೆ ದಾರಿದೀಪವಾಗಲಿ ಎಂದರು.ಪಿಇಎಸ್ ಟ್ರಸ್ಟ್ನ ಮುಖ್ಯ ಆಡಳಿತ ಸಂಯೋಜಕರಾದ ಡಾ.ಆರ್. ನಾಗರಾಜ ಮಾತನಾಡಿ, ಸಂಸ್ಥೆಯು ಬೆಳೆದು ಬಂದ ಸಾಧನೆಯ ಮೈಲಿಗಲ್ಲುಗಳನ್ನು ವಿವರಿಸಿದರು.
ಪಿಇಎಸ್ ಸಂಸ್ಥೆಯು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸೇವೆಯ ಮೂಲಕ ಗುರುತಿಸಿಕೊಂಡಿದೆ. ಸುಸಜ್ಜಿತವಾದ ಮೂಲಭೂತ ಸೌಕರ್ಯಗಳು, ಅನುಭವಿ ಹಾಗೂ ಸಮರ್ಪಣಾ ಮನೋಭಾವದ ಅಧ್ಯಾಪಕ ವೃಂದದವರು ಮೊದಲಾದ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಇನ್ಫೋಸಿಸ್, ಟಾಟಾ, ಟಿಸಿಎಸ್ ಮೊದಲಾದ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ಮಾಡುತ್ತಿವೆ ಎಂದರು.
ಪಿಇಎಸ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಆರ್. ಸುಭಾಷ್ ಬಿ ಆರ್ ಅವರು ಉಪಸ್ಥಿತರಿದ್ದರು.
ಶೈಕ್ಷಣಿಕ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ.ಆರ್. ಸ್ವಾಮಿ ಸ್ವಾಗತಿಸಿ, ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಆರ್. ಶೇಕರ್ ವಂದಿಸಿದರು. ಪ್ರತೀಕ್ಷಾ ಶೆಣೈ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post