ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಮತ್ತು ಮನಃಶಾಂತಿ ಹೊಂದಿದಾಗ ಮಾತ್ರ ಸಂಪೂರ್ಣ ಆರೋಗ್ಯ ಸಾಧ್ಯ. ಧನ್ವಂತರಿ ಆರಾಧನೆ ಹಾಗೂ ಆಯುರ್ವೇದದ ಜೀವನ ಮೌಲ್ಯಗಳು ಆರೋಗ್ಯಪೂರ್ಣ ಜೀವನ ನಡೆಸಲು ಪ್ರೇರಣೆ ನೀಡುತ್ತವೆ ಎಂದು ಆರೋಗ್ಯ ಭಾರತಿಯ ಅಧ್ಯಕ್ಷೆ ಡಾ. ಕೆ.ಜಿ. ಪಲ್ಲವಿ ಹೇಳಿದರು. ಶಿವಮೊಗ್ಗ (Shivamogga) ನಗರದ ಗೋಪಾಳದಲ್ಲಿರುವ ಫ್ರೆಂಡ್ಸ್ ಸೆಂಟರ್ನಲ್ಲಿ (Friends center) ಆರೋಗ್ಯ ಭಾರತಿಯ ವತಿಯಿಂದ ಆಯೋಜಿಸಿದ್ದ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Shivamogga: ಆಯುರ್ವೇದ ಸಮಗ್ರ ಜೀವನ ಪದ್ಧತಿ
ಭಗವಾನ್ ಧನ್ವಂತರಿಯನ್ನು ಆಯುರ್ವೇದದ ಅಧಿದೇವತೆ ಹಾಗೂ ದೇವತೆಗಳ ದೈವಿಕ ವೈದ್ಯರೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕ್ಷೀರಸಾಗರ ಮಥನದ ಸಂದರ್ಭದಲ್ಲಿ ಅಮೃತ ಕಲಶದೊಂದಿಗೆ ಧನ್ವಂತರಿ ದೇವರು ಉದ್ಭವಿಸಿದರೆಂಬ ಪೌರಾಣಿಕ ನಂಬಿಕೆಯಿದೆ. ಆಯುರ್ವೇದದ ಮೂಲ ಬೇರು ಧನ್ವಂತರಿ ಪರಂಪರೆಯಲ್ಲಿದೆ ಎಂದು ತಿಳಿಸಿದರು.

ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಪದ್ಧತಿಯಲ್ಲ. ರೋಗಗಳು ಬಾರದಂತೆ ತಡೆಗಟ್ಟುವುದು, ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವುದು ಹಾಗೂ ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವುದನ್ನು ಕಲಿಸುವ ಸಮಗ್ರ ಜೀವನ ಪದ್ಧತಿಯಾಗಿದೆ. ಆಯುರ್ವೇದದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಆರೋಗ್ಯ ಜಾಗೃತಿಗೆ ಧನ್ವಂತರಿ ಜಯಂತಿ ಪ್ರೇರಣೆಯಾಗಲಿ
ಧನ್ವಂತರಿ ಜಯಂತಿಯ ಆಚರಣೆ ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಸಂಕಲ್ಪವಾಗಬೇಕು. ಧನ್ವಂತರಿ ದೇವರ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಜೀವನದಲ್ಲಿ ನೆಮ್ಮದಿ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಸಾಂಪ್ರದಾಯಿಕ ವೈದ್ಯಕೀಯ ಜ್ಞಾನವನ್ನು ಗೌರವಿಸುವುದರ ಜೊತೆಗೆ ಆಯುರ್ವೇದದ ಜೀವನ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅನುಸರಿಸಬೇಕು ಎಂದು ಕರೆ ನೀಡಿದರು.
Also Read>> ಕೈಯಲ್ಲಿ ಹಾಲಿನ ಪ್ಯಾಕೆಟ್ ಹಿಡಿದು ಬೀದಿಗಿಳಿದ ಮಹಿಳೆಯರು! ಕಾಂಗ್ರೆಸ್ ಸರ್ಕಾರಕ್ಕೆ ಈಶ್ವರಪ್ಪ ಎಚ್ಚರಿಕೆ!
ಪ್ರತಿಯೊಬ್ಬರೂ ಆರೋಗ್ಯದ ಮಹತ್ವವನ್ನು ಅರಿತು, ಪ್ರಕೃತಿಸ್ನೇಹಿ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಧನ್ವಂತರಿ ದೇವರ ಆಶೀರ್ವಾದದಿಂದ ಸರ್ವರಿಗೂ ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಭಾಗ ಸಂಯೋಜಕ ಎನ್. ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ರಾಘವೇಂದ್ರ, ದೇವೇಂದ್ರಪ್ಪ, ಶಶಿ, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಮಲ್ಲಿಕಾರ್ಜುನ್ ಕಾನೂರು, ಮಾಜಿ ಅಧ್ಯಕ್ಷ ಜಿ. ವಿಜಯ್ ಕುಮಾರ್, ನಾಗರಾಜು, ರಮೇಶ್, ಸುನೀತಾ, ಮನೋಹರ್, ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









