ಶಿವಮೊಗ್ಗ: ಗಾಂಧೀಜಿಯವರ ಕನಸು ಮಹಿಳಾ ಸ್ವಾತಂತ್ರ, ಸಾರ್ಥಕದ ಹಾದಿಯಲ್ಲಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.
ಕಲ್ಪತರು ಆಗ್ರೋ ಸೆಂಟರ್’ನಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ಅಹಿಂಸಾ ಮಾರ್ಗವಾಗಿ ಸ್ವಾತಂತ್ರ್ಯ ತಂದುಕೊಟ್ಟವ, ಸಸ್ಯ ಆಹಾರದ ಪ್ರಯೋಗಾಕಾರ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದಾತ, ಆತ್ಮಸಾಧಕ, ಅಪ್ಪಟ ಕರ್ಮಯೋಗಿ ಗಾಂಧೀಜಿ ಎಂದರು.
ಸ್ವಾತಂತ್ರ್ಯ ಮತ್ತು ಸ್ವದೇಶಿ ಚಳುವಳಿಯನ್ನೇ ಮುಖ್ಯ ಮಂತ್ರವನ್ನಾಗಿಸಿಕೊಂಡು, ಉಪ್ಪು ಹಾಗೂ ಚರಕ ಸಂಹಿತೆಯೊಂದಿಗೆ ಭಾರತದ ಸಮಸ್ತ ಜನರ ಸ್ವಾವಲಂಬಿ ಬದುಕಿಗೆ ಪ್ರೇರಕವಾಗುವ ಕರೆ ನೀಡಿ, ಉಪವಾಸ, ಅಸಹಕಾರ ಚಳುವಳಿ ಮೂಲಕ ದೇಶದಾದ್ಯಂತ, ಪ್ರಪಂಚದಾದ್ಯಂತ ಖ್ಯಾತಿ ಗಳಿಸಿ, ಭಾರತಕ್ಕೆ ಸ್ವಾತಂತ್ರ್ಯವನ್ನೂ ಗಳಿಸಿಕೊಟ್ಟ ಗಾಂಧೀಜಿ ಎಂದಿಗೂ ಅಜರಾಮರ ಎಂದರು.
ಗಾಂಧೀಜಿಯವರ 150ನೆಯ ಜನ್ಮ ದಿನಾಚರಣೆಯ ಈ ದಿನ, ಸ್ವತಂತ್ರ್ಯ ಭಾರತ ಕಲ್ಪನೆಯಲ್ಲಿ ಅನೇಕ ಕಂಡ ಕನಸುಗಳನ್ನು ಕಂಡ ಅವರ ಚಿಂತನೆಗಳು; ಪ್ರಮುಖವಾಗಿ ಸ್ತ್ರೀ – ಪುರುಷ ಸಮಾನತೆ, ಸ್ತ್ರೀ ಶಿಕ್ಷಣಕ್ಕೆ ಆದ್ಯತೆ, ಸ್ತ್ರೀಯರ ಸ್ವಾತಂತ್ರ್ಯದ ಪರಿಕಲ್ಪನೆ. ಇವೆಲ್ಲವೂ ನಿಜವಾದ ಅರ್ಥದಲ್ಲಿ ಮುನ್ನಡೆದಿದೆಯೇ? ಮಹಿಳೆ ಸ್ವತಂತ್ರಳಾಗಬೇಕಾದರೆ ಮೊದಲು ನಿರ್ಭೀತಳಾಗಬೇಕು. ಸಮಾಜ ಹೇರಿರುವ ಸಾಂಸ್ಕೃತಿಕ, ಸಾಮಾಜಿಕ ಅಸಹಾಯಕತೆಯಿಂದ ಹೊರಬರಬೇಕು ಎಂಬ ಅವರ ಆಶಯ ನೆರವೇರಿದೆ ಎಂದುಕೊಂಡರೆ, ಇಂದಿಗೂ ಹೆಣ್ಣು ಮಕ್ಕಳಿಗಿರುವ ಅನೇಕ ಕಟ್ಟುಪಾಡುಗಳು, ಅವಳ ಮೇಲಾಗುತ್ತಿರುವ ದೌರ್ಜನ್ಯ, ಅವಳ ಶಿಕ್ಷಣದ ನಂತರದ ಉದ್ಯೋಗ ಸ್ವಾಂತ್ರ್ಯದ ಕಲ್ಪನೆ, ಬದುಕಿನ ಮುಖ್ಯ ಘಟ್ಟವಾದ ವಿವಾಹದ ಕಲ್ಪನೆ, ನಂತರದ ಕುಟುಂಬ, ಸಮಾಜದಲ್ಲಿ ಅವಳಿಗಿರುವ ಸ್ವಾತಂತ್ರ್ಯದ ಕಲ್ಪನೆಯಲ್ಲಿ ಚಿಂತಿಸೋಣ. ನಮ್ಮ ಅಂತರಾಳದಲ್ಲಿ ಧನಿಸುವ ಅಭಿಪ್ರಾಯಗಳೊಂದಿಗೆ ಗಾಂಧೀಜಿಯವರ ಮಹಿಳಾಪರ ಚಿಂತನೆ ಗಳತ್ತ ಬೆಳಕು ಹಾಯಿಸೋಣ ಎಂದರು.
ಪತ್ರಕರ್ತ ಹಾಗೂ ಜೆ.ಸಿ.ಐ. ಶರಾವತಿಯ ಪತ್ರಿಕಾ ಸಂಪಾದಕರೂ ಆದ ಗಾ.ರಾ. ಶ್ರೀನಿವಾಸ್ ಮಾತನಾಡಿ, ಗಾಂಧೀತಾತ ಎಂದೇ ಪ್ರಖ್ಯಾತರಾದ ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮಾತ್ರವಲ್ಲದೇ ಅವರೂ ಕೂಡ ಒಬ್ಬ ಪತ್ರಕರ್ತ, ಲೇಖಕ, ಸಾಹಿತಿ ಆಗಿದ್ದರು. ದಾಸ್ಯದ ಸಂಕೋಲೆಯಲ್ಲಿದ್ದ ಭಾರತೀಯರನ್ನು ದಾಸ್ಯದಿಂದ ವಿಮುಕ್ತಿಗೊಳಿಸಲು ತುಂಡು ಬಟ್ಟೆ ಉಟ್ಟು ಸ್ವಾಭಿಮಾನ ಭರಿತ ರಾಷ್ಟ್ರದ ಪ್ರತಿಷ್ಠಾಪನೆಗೆ ತಮ್ಮ ಸ್ವಂತದೆಲ್ಲವನ್ನು ತ್ಯಜಿಸಿದರು. ಆದರೆ, ಇಂದು ದೇಶ ಸ್ವತಂತ್ರ್ಯವಾಗಿದೆ, ಸ್ವತಂತ್ರ್ಯ ಭಾರತದ ಗಾಂಧೀಜಿಯ ಕಲ್ಪನೆ ಸರ್ವರಿಗೂ ರೋಟಿ, ಕಪಡಾ, ಮಖಾನ್ ಯಾಕೆ ಇನ್ನೂ ದೊರೆತಿಲ್ಲ. ಅದೇಕೆ ಇಂದಿಗೂ ಅದೆಷ್ಟೋ ಜನರು ರಸ್ತೆ ಬದಿಯಲ್ಲಿ ವಾಸ ಮಾಡುತ್ತಿದ್ದಾರೆ. ಕಾರಣ ವ್ಯವಸ್ಥೆಯನ್ನು ದೂರುವುದೇ? ಈ ಕುರಿತು ಕ್ರಮ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಸಿಐ ಶಿವಮೊಗ್ಗ ವಿವೇಕ್’ನ ಅಧ್ಯಕ್ಷ ವಿನಯ್ ಗೌಡ, ಶರಾವತಿಯ ಅಧ್ಯಕ್ಷ ಜ್ಯೋತಿ ಹರಳಪ್ಪ, ಶ್ರೀರಾಮಕೃಷ್ಣ ಚಾರಿಟಬಲ್ ಟ್ರಸ್ಟ್‌ನ ಭಾರತೀ ರಾಮಕೃಷ್ಣ, ಸಸ್ಯ ಲೈಫ್‌ನ ಕಲ್ಪತರು ಮೋಹನ್, ಸೌಮ್ಯ, ಅನಿತಾ, ಯಾಹ್ಯಾ, ಕವಿತಾ ಸಾರ್ಗ, ದಿವ್ಯ, ಶೋಭಾ, ಮಮತ, ಪರಮೇಶ್, ರಾಮ್ಮಣ್ಣ ಮುಂತಾದವರು ಆಗಮಿಸಿದ್ದು ಪ್ರತಿಯೊಬ್ಬರೂ ಗಾಂಧೀಜಿಯವರ ಸ್ವಾತಂತ್ರ್ಯ ಭಾರತ, ಮತ್ತವರ ಮಹಿಳಾ ಪರ ಕಲ್ಪನೆಗಳ ವಿಷಯವಾಗಿ ಮಾತನಾಡಿದರು.
ನಮ್ಮ ದೇಶದ ಮತ್ತೋರ್ವ ಮಹಾ ನಾಯಕ, ದೇಶದ ಎರಡನೇ ಪ್ರಧಾನಿ, ಶ್ರೀಲಾಲ್ ಬಹದೂರ್ ಶಾಸ್ತ್ರಿಯವರ ಜಯಂತಿಯಂದಿಗೆ ಅವರ ಆದರ್ಶಗಳ ಅನುಸರಣೆ ಸಂಯಮ, ವಿವೇಕ, ಆತ್ಮ ವಿಶ್ವಾಸದ ಪ್ರತೀಕ, ದಕ್ಷ, ಪ್ರಾಮಾಣಿಕ ದೇಶಪ್ರೇಮದ ಬಗ್ಗೆ ಸ್ಮರಿಸಲಾಯಿತು.
ಜೆಸಿಐ ಶಿವಮೊಗ್ಗ ಶರಾವತಿ, ಜೆಸಿಐ ಶಿವಮೊಗ್ಗ ವಿವೇಕ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಶಿವಮೊಗ್ಗ, ಶ್ರೀರಾಮಕೃಷ್ಣ ಚಾರಿಟಬಲ್ ಟ್ರಸ್ಟ್, ಸಸ್ಯ ಲೈಫ್ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
Discussion about this post