ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೆಹಲಿ ಮಾದರಿ ಆಡಳಿತವನ್ನು ರಾಷ್ಟ್ರದಾದ್ಯಂತ ನೀಡಲು ಉತ್ಸುಕವಾಗಿರುವ ಆಮ್ ಅದ್ಮಿ ಪಕ್ಷ ಕೇಂದ್ರ ನಿಯೋಗ ರಾಜ್ಯದ ಆರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಮಿಸ್ ಕಾಲ್ ನೀಡುವುದರ ಮೂಲಕ ಸಾರ್ವಜನಿಕರು ನಿಯೋಗವನ್ನು ಭೇಟಿಯಾಗಬಹುದು ಎಂದು ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇತ್ತೀಚೆಗೆ ದೇಶದಾದ್ಯಂತ ನಡೆದ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಸಾಧನೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಇಡೀ ದೇಶದಾದ್ಯಂತ ಪರ್ಯಾಯ, ಜನಪರ ರಾಜಕಾರಣ ಹಬ್ಬುತ್ತಿರುವ ಮುನ್ಸೂಚನೆ ಇದಾಗಿದೆ. ವಿಶ್ವ ಮಾನ್ಯ ದೆಹಲಿ ಮಾದರಿ ಈಗ ಇಡೀ ದೇಶಕ್ಕೆ ಪಸರಿಸುತ್ತಿದೆ. ಈ ಬದಲಾವಣೆಗೆ ನೀವೂ ಜೊತೆಯಾಗಬಹುದು ಎಂದಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚೆಗೆ ನೆಡೆದ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತ ಚುನಾವಣೆಯಾಗಿದ್ದು, ಇಲ್ಲಿ, ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ತತ್ವ, ಸಿದ್ದಾಂತದ ಬಗ್ಗೆ ಒಲವಿರುವಂತಹ ಅನೇಕ ಪ್ರಾಮಾಣಿಕ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಇಂತಹ ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷದ ಬಗ್ಗೆ ಒಲವು ವ್ಯಕ್ತಪಡಿಸಿದ್ದು, ದೆಹಲಿ ಮಾದರಿ ಯಶಸ್ವಿ, ಜನಪರ, ಪರ್ಯಾಯ ರಾಜಕಾರಣವನ್ನು ಕರ್ನಾಟಕದಲ್ಲಿಯೂ ಪ್ರಚುರ ಪಡಿಸಲು ಹಾಗೂ ಬೇರು ಮಟ್ಟದಿಂದ ಪಕ್ಷವನ್ನು ಬಲಪಡಿಸಲು ಮುನ್ನುಡಿಯಾಗಲಿದೆ ಎಂದರು.
ಅರವಿಂದ ಕೇಜ್ರಿವಾಲ್ ಅವರ ದೆಹಲಿ ಮಾದರಿಯ ಬಗ್ಗೆ ಕರ್ನಾಟಕದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಇದರಿಂತ ಉತ್ಸಾಹಗೊಂಡ ಕೇಜ್ರಿವಾಲ್ ಅವರ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಲು ತಂಡ ರಚನೆ ಮಾಡಿದ್ದು ರಾಜ್ಯ ಉಸ್ತುವಾರಿ ರೋಮಿ ಭಾಟಿ ನೇತೃತ್ವದಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಹಿರಿಯ ಮುಖಂಡ ಗೋಪಾಲ್ ವೆಂಕಟರೆಡ್ಡಿ ಅವರನ್ನು ಒಳಗೊಂಡ ನಿಯೋಗ ರಚನೆ ಮಾಡಲಾಗಿದೆ. ಈ ನಿಯೋಗವು ಮೊದಲ ಹಂತದಲ್ಲಿ ಆರು ಜಿಲ್ಲೆಗಳಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಪಕ್ಷ ಸಂಘಟನೆ ಹಾಗೂ ಮುಂಬರುವ ದಿನಗಳಲ್ಲಿ ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಭ್ಯರ್ಥಿಗಳ ಚರ್ಚೆ ನಡೆಯಲಿದೆ ಎಂದರು.
ದೆಹಲಿ ಮಾದರಿ ಜನಪರ, ಪರ್ಯಾಯ ರಾಜಕಾರಣ, ಆಮ್ ಆದ್ಮಿ ಪಕ್ಷ ತತ್ವ ಸಿದ್ದಾಂತದ ಬಗ್ಗೆ ಒಲವಿರುವಂತಹ ಅಭ್ಯರ್ಥಿಗಳು/ಸದಸ್ಯರು, ಜಿಲ್ಲಾವಾರು ಮುಖಂಡರನ್ನು ಅಥವಾ ನಿಯೋಗವನ್ನು ಭೇಟಿ ಮಾಡಬಹುದು. ಮೊಬೈಲ್ ಸಂಖ್ಯೆ 7669400410 ಮಿಸ್ ಕಾಲ್ ಕೊಡುವುದರ ಮೂಲಕ ನಿಮ್ಮ ಬೆಂಬಲ ವ್ಯಕ್ತಪಡಿಸಬಹುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post