ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ನೆಹರೂ ಕ್ರೀಡಾಂಗಣ ಧೂಳಿನಿಂದ ತುಂಬಿ ಹೋಗಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸರಿಸುಮಾರು ಕಳೆದ ಒಂದು ವರ್ಷದಿಂದ ನೆಹರು ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಎರಡು ಬೃಹತ್ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಈ ಕಟ್ಟಡಗಳ ನಿರ್ಮಾಣದಲ್ಲಿ ಯಾವುದೇ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡದ ಗೋಡೆಗಳ ನಿರ್ಮಾಣ ಹಂತದಲ್ಲಿ ಯಾವುದೇ ಕ್ಯೂರಿಂಗ್ ಮಾಡದೆ ಇಂದು ಶಾಸಕರು ಸ್ಮಾರ್ಟ್ ಸಿಟಿ ಕಾಮಗಾರಿಗಳ ತಪಾಸಣೆಗಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ಕ್ಯೂರಿಂಗ್ ಮಾಡಲಾಗಿದೆ ಹಾಗೂ ಕಟ್ಟಡದ ಸುತ್ತಮುತ್ತಲು ಸ್ವಚ್ಛಗೊಳಿಸಲಾಗಿದೆ ಎಂದರು.

Also read: ಪ್ರಾಣಿಗಳೇ ತಿನ್ನದ ತಂಬಾಕನ್ನು ಮನುಷ್ಯರಾದವರು ಸೇವಿಸುವುದು ತರವಲ್ಲ: ನ್ಯಾ. ಮಲ್ಲಿಕಾರ್ಜುನ ಗೌಡ ಕಿವಿಮಾತು
ಶಾಸಕರು ವೀಕ್ಷಣೆಗೆ ಬರುತ್ತಾರೆ ಎನ್ನುವ ಹಿಂದಿನ ದಿನ ಕಾಮಗಾರಿ ನಡೆಯುತ್ತಿರುವ ಸ್ಥಳ ಮತ್ತು ಸುತ್ತಲಿನ ಜಾಗವನ್ನು ಸ್ವಚ್ಛ ಮಾಡುವುದು ಇತ್ತೀಚಿಗೆ ಸರ್ವೇಸಾಮಾನ್ಯವಾಗಿ ಕಾಣುತ್ತಿದೆ. ಆದ್ದರಿಂದ ಶಾಸಕರು, ದಯಮಾಡಿ ಸ್ಮಾರ್ಟ್ ಸಿಟಿ ಇಂಜಿನಿಯರ್ಸ್’ಗಳ ಜೊತೆ ಕಾಮಗಾರಿಗಳ ವೀಕ್ಷಣೆಗೆ ಹೋಗುವ ಬದಲಾಗಿ ಸಂಘ ಸಂಸ್ಥೆಗಳ ಜೊತೆಗೆ ಸೇರಿ ವೀಕ್ಷಣೆ ಮಾಡಿದಲ್ಲಿ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಮಾನ್ಯ ಶಾಸಕರನ್ನು ಅಧಿಕಾರಿಗಳು ದಾರಿ ತಪ್ಪಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.













Discussion about this post