ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಗ ರಂಜನಿ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಜ.17, 18ರಂದು ಸಂಜೆ 5:20ಕ್ಕೆ ಕುವೆಂಪು ರಂಗಮಂದಿರದಲ್ಲಿ ‘ಗಾನ ಗಂಧರ್ವನ ನೂರೊಂದು ನೆನಪು’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಗರಂಜನಿ ಟ್ರಸ್ಟ್‌ನ ಮುಖ್ಯಸ್ಥ, ಗಾಯಕ ಪ್ರಹ್ಲಾದ್ ದೀಕ್ಷಿತ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದಶಮಾನೋತ್ಸವ ಸಮಾರಂಭವು ಕೇವಲ ಟ್ರಸ್ಟ್‌ನ 10 ವರ್ಷಗಳ ಸಾಧನೆಗೆ ಸಂಭ್ರಮವಷ್ಟೇ ಅಲ್ಲದೆ ಸ್ವರ ಸಾಮ್ರಾಟ್, ಹಲವಾರು ಪ್ರಶಸ್ತಿ ವಿಜೇತ, ಭಾರತೀಯ ಸಂಗೀತ ಲೋಕದ ಮಹಾನ್‌ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ #S P Balasubrahmanyam ಅವರ ಸಂಗೀತ ಪರಂಪರೆಗೆ ನಮನ ಸಲ್ಲಿಸುವ ವಿಶೇಷ ಕಾರ್ಯಕ್ರಮವಾಗಿದೆ. ಜ.೧೭ರಂದು ಪ್ರೇಕ್ಷಕರಿಗಾಗಿ ‘ನನ್ನ ಬದುಕಿನಲ್ಲಿ ಎಸ್‌ಪಿಬಿ’ ಎಂಬ ವಿಷಯದ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಪ್ರೇಕ್ಷಕರೆಲ್ಲರೂ ಸೇರಿ ವಾದ್ಯವೃಂದದೊಂದಿಗೆ ಕೂತಲ್ಲೇ ಹಾಡುವುದರ ಮೂಲಕ ಗಾನಗಾರುಡಿಗನಿಗೆ ನಮನ ಸಲ್ಲಿಸಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾದ ಸರಳ ಹಾಗೂ ಉಪಯುಕ್ತ ಕರೋಕೆ ಗಾಯನ ಕಾರ್ಯಾಗಾರ, ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ ಒಟ್ಟಾಗಿ ಹಾಡಿ ಕಲಿಯುವ ಸಂಗೀತ ಜ್ಯಾಮಿಂಗ್ ಸೆಷನ್ ‘ಕರೋಕೆ ಕಮಾಲ್’, ಟ್ರಸ್ಟ್‌ನ ವಿದ್ಯಾರ್ಥಿಗಳಿಗೆ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುವ ಕಾರ್ಯಕ್ರಮ ‘ಗಾನ ಕಲರವ’, ಭಕ್ತಿಗೀತೆಗಳ ಮೂಲಕ ಮನೆ ಮನೆಗೂ ಸಂಗೀತ ಮತ್ತು ಭಕ್ತಿಯ ಸಂದೇಶವನ್ನು ತಲುಪಿಸಿದ ಕಾರ್ಯಕ್ರಮ, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿ ಭಕ್ತಿ-ಭಾವದಿಂದ ಭಜನೆಯನ್ನು ಸಮರ್ಪಿಸುವ ಕಾರ್ಯಕ್ರಮ ಹೀಗೆ ವೈವಿಧ್ಯಮಯ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದರು.
ರಾಗ ರಂಜಿನಿ ಟ್ರಸ್ಟ್ ಪ್ರತಿವರ್ಷವೂ ವಿಭಿನ್ನ ಸಂಗೀತ ಪರಿಕಲ್ಪನೆಗಳನ್ನು ಆಯ್ಕೆಮಾಡಿ ರಾಗ ರಂಜಿನಿ ನಾದೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಮಾಜಮುಖಿ ಸೇವೆಗೆ ನಿನಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳಲ್ಲಿಯೂ ಸಕ್ರೀಯವಾಗಿರುವ ಟ್ರಸ್ಟ್ ’ನಮಃ ಶಿವಾರ್ಪಣಮಸ್ತು’ ಸಂಕಲ್ಪದಡಿ 11 ಕೋಟಿ ಶಿವ ಪಂಚಾಕ್ಷರಿ ಜಪ ಪೂರ್ಣಗೊಳಿಸಿದ್ದಲ್ಲದೆ, ಚಂಡಿಕಾಹೋಮ, ಲಕ್ಷ ಬಿಲ್ವಾರ್ಚನೆ, ಸತ್ಯನಾರಾಯಣ ಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಟ್ರಸ್ಟ್ 11ಕ್ಕೂ ಹೆಚ್ಚು ಬ್ಯಾಚುಗಳಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಗೀತಾಭ್ಯಾಸ ಮಾಡಿಸುತ್ತಿದೆ. ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ತರಗತಿಗಳ ಮೂಲಕ ವ್ಯವಸ್ಥಿತ ಸಂಗೀತ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು.
ಜ.17ರ ಸಂಜೆ 5:30ಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಟ್ರಸ್ಟಿನ ಅಧ್ಯಕ್ಷ ಮಾನವೇಂದ್ರ ದೀಕ್ಷಿತ್, ನಾಗರಾಜ್ ಎಸ್.ಆರ್. ಉಪಸ್ಥಿತರಿರುವರು ಎಂದು ತಿಳಿಸಿದರು.
ಜ.18ರಂದು ಪ್ರೇಕ್ಷಕರಿಗಾಗಿ ‘ಒಂದು ಹಾಡು-ನಿಮ್ಮ ಆಯ್ಕೆ’ ಎಂಬ ಕಾರ್ಯಕ್ರಮದಡಿಯಲ್ಲಿ ಪ್ರೇಕ್ಷಕರಿಂದ ಆಯ್ಕೆಯಾದ ಹಾಡಿನ ಪ್ರಸ್ತುತಿ ಮತ್ತು ಲಕ್ಕಿಡ್ರಾ ಇದ್ದು, ಪ್ರವೇಶ ಉಚಿತವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನುಷಾ ಕಾನ್ಲೆ, ಮಾಲ್ಹಸಾ, ತುಷಾರಿ, ಸುಷ್ಮಾ, ಸುಮಾ, ಅನಿಲ, ಪೂರ್ಣ, ಆತ್ಮಾರಾಮ್, ನವೀನ್, ಪ್ರಶಾಂತ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















