ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಸಕ್ತ ಕಾಲಘಟ್ಟದಲ್ಲಿ ದೈನಂದಿನ ಚಟುವಟಿಕೆಗಳನ್ನು ಚಾಣಾಕ್ಷತನದಿಂದ ಅತಿ ಕಡಿಮೆ ಅವಧಿಯಲ್ಲಿ ಸಂಪೂರ್ಣಗೊಳಿಸಲು ತಾಂತ್ರಿಕ ಕ್ಷೇತ್ರವು ಕೊಡುಗೆಯಾಗಿ ನೀಡುತ್ತಿರುವ ಹಲವು ಪ್ರಾಯೋಗಿಕ ತಂತ್ರಜ್ಞಾನಗಳ ಸದ್ಭಳಕೆಯು ಪ್ರಸ್ತುತತೆಯನ್ನು ಹೊಂದಿದೆ ಎಂದು ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ್ ಆರ್. ತಿಳಿಸಿದರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ ವಿಷಯದ ಕುರಿತಾದ ಪ್ರಾಯೋಗಿಕ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಾಲಕಾಲಕ್ಕೆ ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರವು ಒಟ್ಟಾರೆಯಾಗಿ ಪ್ರಯೋಗಗಳನ್ನು ಕಾರ್ಯಗತರೂಪಕ್ಕೆ ತಂದು ಅಸಾಧಾರಣ ಮಟ್ಟದಲ್ಲಿ ದೇಶದ ಹಾಗೂ ಮಾನವ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಕಾರ್ಯನಿರ್ವಹಿಸುತ್ತಲೇ ಬಂದಿದೆ ಎಂದರು.
ಜೀವನಮಟ್ಟವನ್ನು ಸುಧಾರಿಸುವಲ್ಲಿ ಹಾಗೂ ಉತ್ತುಂಗದೆಡೆಗೆ ತಲುಪುವಲ್ಲಿ ಒಂದು ಪ್ರಮುಖ ಅಸ್ತ್ರವಾಗಿ ತಂತ್ರಜ್ಞಾನ ಕ್ಷೇತ್ರದ ಇಂಟರ್‌ನೆಟ್ ಆಫ್ ಥಿಂಗ್ಸ್ ಎಂಬ ತಂತ್ರಜ್ಞಾನವು ಸಹಾಯ ಹಸ್ತವನ್ನು ಚಾಚಿದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತ ಇಲ್ಲ. ಕಾಲಮಾನಕ್ಕೆ ತಕ್ಕಂತೆ ಸಾಮಾಜಿಕವಾಗಿ ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ವೈಜ್ಞಾನಿಕ ಕ್ಷೇತ್ರವು ಹಲವು ಅಸಾಧಾರಣ ತಾಂತ್ರಿಕ ನೈಪುಣ್ಯತೆಯುಳ್ಳ ಪ್ರಯೋಗಗಳನ್ನು ಅನಾವರಣಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ದಿನನಿತ್ಯದ ಹಲವು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಉತ್ಕೃಷ್ಟ ರೀತಿಯಲ್ಲಿ ಪೂರ್ಣಗೊಳಿಸಲು ಸಹಕಾರಿಯಾಗಲು ತಾಂತ್ರಿಕ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಹಲವು ತಂತ್ರಜ್ಞಾನಗಳ ಸದ್ಬಳಕೆಯ ಪ್ರಸ್ತುತತೆಯನ್ನು ಪಡೆದಿವೆ ಎಂದರು.
Also read: Nation will be completely free from terrorism, separatism, and Naxalism in Modi 3.0: Amit Shah
ತಂತ್ರಜ್ಞಾನ ಕ್ಷೇತ್ರವು ಅದ್ವಿತೀಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಇಂಟರ್‌ನೆಟ್ ಆಫ್ ಥಿಂಗ್ಸ್ ಎಂಬ ವಿಷಯದ ಕುರಿತಾಗಿ ಪ್ರಾಯೋಗಿಕ ಚಾಕಚಕ್ಯತೆಗಳನ್ನು ಒಳಗೊಂಡಿರುವ ತಂತ್ರಜ್ಞಾನಗಳನ್ನು ಇಂಜಿನಿಯರ್‌ಗಳು ಅಳವಡಿಸಿಕೊಳ್ಳುವಲ್ಲಿ ಕಾರ್ಯತತ್ಪರರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಹೆಚ್ಚಿನ ಜ್ಞಾನಾರ್ಜನೆ ಹೊಂದಲು ತಂತ್ರಜ್ಞಾನವನ್ನು ಸದಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪಿಇಎಸ್‌ಐಟಿಎಮ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎನ್. ಯುವರಾಜು ಮಾತನಾಡಿ, ಐಓಟಿ ತಂತ್ರಜ್ಞಾನವು ಮಾನವ ಸಮಾಜದ ಅನೇಕ ಚಟುವಟಿಕೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತನ್ನ ಪ್ರಸ್ತುತತೆಯನ್ನು ನಿರೂಪಿಸುತ್ತಾ ಬಂದಿರುವುದರಲ್ಲಿ ಅದರ ಅಗಾಧತೆ ಅಡಗಿದೆ ಎಂದು ಹಲವು ಪ್ರಾಯೋಗಿಕ ಉದಾಹರಣೆಗಳ ಸಮೇತ ಮನಮುಟ್ಟುವಂತೆ ತಿಳಿಸಿದರು.
ವಿದ್ಯಾರ್ಥಿಗಳು ಪ್ರಸ್ತುತ ಕಂಪ್ಯೂಟರ್ ತಂತ್ರಜ್ಞಾನ ಔದ್ಯೋಗಿಕ ಕ್ಷೇತ್ರದಲ್ಲಿ ಐಓಟಿ ತಂತ್ರಜ್ಞಾನದ ಹೆಚ್ಚಿನ ಬಳಕೆಯನ್ನು ಮಾಡಿಕೊಳ್ಳುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚ್ಯವಾಗಿ ನುಡಿದರು.
ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಸಂಜಯ್ ಮಾತನಾಡಿ, ಇಂಟರ್‌ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನದೊಂದಿಗೆ ಪಾರಿವಾರಿಕ, ಔದ್ಯೋಗಿಕ, ಬ್ಯಾಂಕಿಂಗ್, ಆರೋಗ್ಯ ಹಾಗೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ಘಟಿಸುತ್ತಿರುವ ಪ್ರಯೋಗಗಳ ಆಮೂಲಾಗ್ರ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಕಾರ್ಯತತ್ಪರರಾಗಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ನಗರದ ಹಲವಾರು ಪದವಿ ಕಾಲೇಜಿನ 200ಕ್ಕೂ ಅಧಿಕ ವಿದ್ಯಾರ್ಥಿಗಳು ತಾವು ತಯಾರಿಸಿದ್ದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸುವ ಮೂಲಕ ಸಭೀಕರನ್ನು ಮಂತ್ರಮುಗ್ಧಗೊಳಿಸಿದರು. ಪಿಇಎಸ್‌ಐಟಿಎಂನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post