ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರ ದಲಿತ, ರೈತ, ಹಿಂದುಳಿದ ಹಾಗೂ ಜನವಿರೋಧಿಯಾಗಿದೆ ಎಂದು ಶಾಸಕ ಡಿ.ಎಸ್. ಅರುಣ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಡವಳಿಕೆ ಜನವಿರೋಧಿಯಾಗಿದೆ. ವಿದ್ಯಾನಿಧಿ, ಕಿಸಾನ್ ಸಮ್ಮಾನ ಯೋಜನೆಗಳನ್ನು ನಿಲ್ಲಿಸಿದ್ದಾರೆ. 8 ಲಕ್ಷದ 73 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಕೇಂದ್ರದಿಂದ ಬಂದಿದ್ದರೂ ಅದನ್ನು ಯೋಜನಾಬದ್ಧವಾಗಿ ವಿತರಿಸಲು ಸರ್ಕಾರ ವಿಫಲವಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಭಿತ್ತನೆಯ ಸಂದರ್ಭದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಗೊಬ್ಬರದ ಕೃತಕ ಅಭಾವ ಕಾಡುತ್ತಿದೆ. ಕೃಷಿ ಸಚಿವ ಮತ್ತು ಸಿಎಂ ಬೇರೆ ಬೇರೆ ಅಂಕಿಅಂಶ ನೀಡುತ್ತಿದ್ದಾರೆ. ಸಿಎಂಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆಯಾದರೆ, ಕೃಷಿ ಸಚಿವರಿಗೆ ಇನ್ನೂ ಉನ್ನತ ಖಾತೆ ಏರುವ ತವಕ. ಯೂರಿಯಾ ಗೊಬ್ಬರಕ್ಕೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತದೆ. ಹವಾಮಾನದ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಆದರೂ ಕೂಡ ಸರ್ಕಾರ ರೈತರಿಗೆ ಗೊಬ್ಬರ ನೀಡಲು ವಿಫಲವಾಗಿದೆ ಎಂದರು.
ರಾಜ್ಯದೆಲ್ಲೆಡೆ ಸರ್ಕಾರದ ನಿಲುವನ್ನು ಖಂಡಿಸಿ, ಬಿಜೆಪಿ ರೈತಮೋರ್ಚಾ ದೊಡ್ಡ ಹೋರಾಟಕ್ಕೆ ಮುಂದಾಗಿದೆ. ಸರ್ಕಾರದ ನೀತಿಯಿಂದ ಗೊಬ್ಬರ ಸಮರ್ಪಕ ವಿತರಣೆಯಲ್ಲಿ ಸೋತಿದ್ದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ. ನ್ಯಾನೋ ಯೂರಿಯಾದ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸುವಲ್ಲಿ ಸರ್ಕಾರ ಸೋತಿದೆ. 14 ಸಾವಿರ ಸಣ್ಣ ಉದ್ಯಮಿಗಳಿಗೆ ಜಿಎಸ್‍ಟಿ ನೋಟೀಸ್ ನೀಡಿ, ಅವರ ಬದುಕಿನ ಮೇಲೆ ಬರೆ ಎಳೆಯಲು ಮುಂದಾಗಿದೆ. ಸಣ್ಣ ಉದ್ಯಮಿಗಳು ಮಾಡುವ ವ್ಯಾಪಾರದಲ್ಲಿ ಅನೇಕ ವಸ್ತುಗಳಿಗೆ ತೆರಿಗೆ ರಿಯಾಯಿತಿ ಇದೆ ಮತ್ತು ಅವರ ಸಂಪೂರ್ಣ ಮಾಹಿತಿಯನ್ನು ಪಡೆದು, ಅವರಿಗೆ ತೆರಿಗೆಯ ಸಂಪೂರ್ಣ ಮಾಹಿತಿಯನ್ನು ಇಲಾಖೆ ನೀಡಿ, ಅವರಿಂದ ಹಣದ ವರ್ಗಾವಣೆ ವ್ಯವಹಾರದ ಬಗ್ಗೆ ಮೊದಲೇ ಮಾಹಿತಿ ನೀಡಬೇಕಿತ್ತು. ವ್ಯಾಪಕ ಪ್ರತಿಭಟನೆಯ ಬಳಿಕ ಈಗ ನೋಟೀಸ್ ವಾಪಾಸು ಪಡೆಯುತ್ತೇವೆ ಎನ್ನುತ್ತಿದ್ದಾರೆ. ಆದರೆ ಇನ್ನೂ ವಾಪಾಸ್ ಪಡೆದಿಲ್ಲ. ಇದೊಂದು ತೂಗುಗತ್ತಿಯಾಗಿ ಮುಂದುವರೆದಿದೆ ಎಂದರು.
ಸಾಕು ದನಗಳನ್ನು ಕಾಡಿಗೆ ಬಿಡಬಾರದು ಎಂದು ನೋಟೀಸು ನೀಡುತ್ತಿದ್ದಾರೆ. ಅದು ಕೂಡ ಸರ್ಕಾರದ ಬೇಜಾಬ್ದಾರಿ ವರ್ತನೆಯನ್ನು ತೋರಿಸುತ್ತದೆ. ಗ್ರಾಮೀಣ ರೈತನ ಬದುಕು ಅರಣ್ಯದ ಜೊತೆಗೆ ಇದೆ. ಅದನ್ನು ಸರ್ಕಾರ ಮೊದಲು ಅರಿತುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗಾಗಿ ಸಾವಿರಾರು ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥರಿಗೆ ಆಗ ಸರಿಯಾದ ಬದಲಿ ವ್ಯವಸ್ಥೆ ಮಾಡದೇ ಇರುವುದರಿಂದ ಈಗ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಕಾಂಗ್ರೆಸ್ಸಿನ ಕೂಸಾದ ಈ ಸಮಸ್ಯೆಯನ್ನು ಬಗೆಹರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಮೂರು ಎಕರೆಗಿಂತ ಕಮ್ಮಿ ಭೂಮಿ ಇದ್ದ ರೈತರಿಗೆ ನೋಟೀಸು ನೀಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಇದ್ದರೂ ಅಧಿಕಾರಿಗಳು ನೋಟೀಸ್ ನೀಡಿ, ರೈತರಿಗೆ ಬೆದರಿಕೆಯೊಡ್ಡಿ ಬೆಳೆಯನ್ನು ನಾಶಮಾಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಸರ್ಕಾರದ ಧೋರಣೆಯ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಪ್ರಮುಖ ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post