ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಮಾರಣಾಂತಿಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಹಾಗೂ ಒಂದರಿಂದ ಹತ್ತನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರಲು ಹಾಗೂ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರವು ವಿಶೇಷ ಕಾಳಜಿ ವಹಿಸಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೊಂದಿಕೊಂಡಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ವಸತಿ ಶಾಲೆಯೊಂದನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ #Madhu Bangarappa ಅವರು ಹೇಳಿದರು.
ಅವರು ಇಂದು ಶಿವಮೊಗ್ಗದ ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ವಿವರ ನೀಡಿ ಮಾತನಾಡುತ್ತಿದ್ದರು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ಪೂರಕ ಮಾಹಿತಿಯನ್ನು ಸಂಗ್ರಹಿಸಿ, ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸುವಂತೆ ಸೂಚಿಸಲಾಗಿತ್ತು. ಈಗಾಗಲೇ ಪಡೆದುಕೊಳ್ಳಲಾಗಿರುವ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ರಾಜ್ಯದಲ್ಲಿ ಕ್ಯಾನ್ಸರ್ಖಾಯಿಲೆಯಿಂದ ಬಾಧಿತರಾಗಿರುವ ಸುಮಾರು 3500ಮಕ್ಕಳು ಇರಬಹುದೆಂದು ಅಂದಾಜಿಸಲಾಗಿದೆ. ಕ್ಯಾನ್ಸರ್ಗುಣಪಡಿಸಬಹುದಾದ ಕಾಯಿಲೆ ಆಗಿರುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರಲು ಹಾಗೂ ಅವರಿಗೆ ಸಕಾಲದಲ್ಲಿ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಲು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ಕ್ಯಾನ್ಸರ್ಬಾದಿತ ಮಕ್ಕಳ ಲಾಲನೆ, ಪಾಲನೆ ದೃಷ್ಠಿಯಿಂದ ಪೋಷಕರಿಗೂ ವಸತಿ ಸೌಲಭ್ಯ ಕೊಡಿಸಲು ಗಮನಹರಿಸಲಾಗಿದೆ. ಆರಂಭಿಸಲು ಉದ್ದೇಶಿಸಲಾಗಿರುವ ಕ್ಯಾನ್ಸರ್ಬಾದಿತ ಮಕ್ಕಳ ಶಾಲೆಗೆ ಆರಂಭದ ಹಂತದಲ್ಲಿ ಸುಮಾರು 1500ಮಕ್ಕಳು ದಾಖಲಾಗಬಹುದಾದ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಎಂದರು.

ಅಲ್ಲದೇ ಇನ್ಫೋಸಿಸ್ಸಂಸ್ಥೆಯ ವತಿಯಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಅತ್ಯಾಧುನಿಕ ಪಾಠೋಪಕರಣಗಳನ್ನು ಒದಗಿಸುವ ನಿಟ್ಟಿನಲ್ಲಿ 200ಕೋಟಿ ರೂ.ಗಳ ಸಹಾಯಧನವನ್ನು ಪಡೆದು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ ಇನ್ನಷ್ಟು ಅನುದಾನವನ್ನು ಸಿ.ಎಸ್.ಆರ್.ನಿಧಿಯಿಂದ ಪಡೆದು, ಜಿಲ್ಲೆಯ ಸರ್ಕಾರಿ ಶಾಲೆಗಳ ಸರ್ವಾಂಗೀಣ ವಿಕಾಸಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಶಾಲೆಗಳಲ್ಲಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುವುದನ್ನು ನಿಯಂತ್ರಿಸಲು ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ತರಗತಿಗಳನ್ನು ನಡೆಸಲು ಅಳವಡಿಸಿಕೊಳ್ಳಲು ಸೂಚಿಸಲಾಗಿದ್ದು, ಪ್ರಥಮ ಹಂತದ ಕಾರ್ಯ ಪ್ರಗತಿಯಲ್ಲಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುವಲ್ಲಿಯೂ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯ ಸೊರಬ, ಸಾಗರ, ಶಿಕಾರಿಪುರ, ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕುಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಹೊಸದಾದ 05ಹಾಸ್ಟೆಲ್ಗಳನ್ನು ಆರಂಭಿಸಲು ಮಂಜೂರಾತಿ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ, ಅವರಿಗೆ ತರಗತಿಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಸಿಮ್ಸ್ನ ಆಡಳಿತ ಮತ್ತು ಉಸ್ತುವಾರಿಯಲ್ಲಿರುವ ಜಿಲ್ಲಾ ಆಸ್ಪತ್ರೆಯ ನಿರ್ವಹಣೆ ಮತ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳ ಅಳಲನ್ನು ಆಲಿಸಲಾಗಿದ್ದು, ಸಿಮ್ಸ್ನ ವೈದ್ಯಕೀಯ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಗ್ಗಾನ್ಆಸ್ಪತ್ರೆಯನ್ನು ಇರುವಂತೆಯೇ ಬಿಟ್ಟು ಪ್ರತ್ಯೇಕವಾದ ಜಿಲ್ಲಾ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು, ಪ್ರತ್ಯೇಕ ಕಟ್ಟಡ ನಿರ್ಮಿಸುವ ಉದ್ದೇಶ ಈಡೇರಲಿದೆ ಎಂದರು.

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗದ ಮಕ್ಕಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸದೇ ಮುಂದವರೆಸಲು ಅನುಕೂಲವಾಗುವಂತೆ ಮೂರು ಹಂತದಲ್ಲಿ ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಲ್ಕರಹಿತವಾಗಿ ಪರೀಕ್ಷೆಗಳಲ್ಲಿ ಪ್ರವೇಶಾವಕಾಶ ನೀಡಲಾಗುತ್ತಿರುವುದು ದೇಶದಲ್ಲಿಯೇ ಕರ್ನಾಟಕ ಮೊದಲು ಎಂದವರು ನುಡಿದರು.
ಒಟ್ಟಾರೆಯಾಗಿ ಶಿಕ್ಷಣ ಸಚಿವನಾಗಿ ಎರಡು ವರ್ಷಗಳ ಅವಧಿಯಲ್ಲಿ ಸಲ್ಲಿಸಿರುವ ಸೇವೆ ತೃಪ್ತಿಕರವಾಗಿದೆ. ಉಳಿದ ಅವಧಿಯಲ್ಲಿ ಇನ್ನಷ್ಟು ರಚನಾತ್ಮಕ ಬದಲಾವಣೆಗಳೊಂದಿಗೆ ಶಿಕ್ಷಣ ಕ್ಷೇತ್ರವನ್ನು ಮುನ್ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಪ್ರಸನ್ನಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post