ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳಂಕಿತ ಮುಖ್ಯಮಂತ್ರಿ ಪಟ್ಟ ಹೊಂದಿರುವ ಸಿದ್ದರಾಮಯ್ಯ #Siddaramaiah ಅವರು ನೈತಿಕ ಹೊಣೆಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹಿಸಿದರು.
ಅವರು ಇಂದು ಶಾಸಕರ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ದೇಶಕ್ಕೆ ಅಪಮಾನವಾಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅದರಲ್ಲೂ ಪ್ರತಿಭಟನೆಯ ಹೆಸರಿನಲ್ಲಿ ರಾಜ್ಯಪಾಲರಿಗೆ ಅಗೌರವವನ್ನು, ಅಪಮಾನವನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

Also read: ಇವಿ ಚಾರ್ಜಿಂಗ್ ದೇಶದಲ್ಲೇ ಮುಂಚೂಣಿ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ ಮುಡಿಗೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಇಲ್ಲವೋ ಎಂಬಾತಾಗಿದೆ. ರಾಜ್ಯಪಾಲರ ಭಾವಚಿತ್ರವನ್ನು ಸುಟ್ಟುಹಾಕುವುದು ಹೇಯ್ಯ ಕೃತ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ ಎಂದರು.

ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗದವರಿಗೆ ಏನೆಲ್ಲ ಮೋಸ ಮಾಡಿದೆ ಎಂದು ರಾಜ್ಯದ ಜನತೆಗೆ ತಿಳಿದಿದೆ. ಹಿಂದುಳಿದ ವರ್ಗಗಳ 1093 ಸಮುದಾಯ ಭವನಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಹಣವನ್ನು ವಾಪಾಸ್ಸು ತೆಗೆದುಕೊಂಡು ಹೊಸದಾಗಿಯೂ ನೀಡದೇ ರದ್ದುಮಾಡಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ ಸುಮಾರು 99 ಸಮುದಾಯಗಳಿಗೆ ಹಣ ನೀಡಬೇಕಿತ್ತು ಒಟ್ಟಾರೆ 300 ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ವಾಪಾಸ್ಸು ತೆಗೆದುಕೊಂಡು ಹಿಂದುಳಿದ ವರ್ಗಗಳಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಹೀಗೆ ಹಣವನ್ನು ವಾಪಾಸ್ಸು ತೆಗೆದುಕೊಂಡಿರುವುದನ್ನು ನೋಡಿದರೆ ಸರ್ಕಾರ ದೀವಾಳಿಯಾಗಿದೆ ಎಂದು ಅರ್ಥ. ಹೊಸ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿಲ್ಲ, ಹಿಂದುಳಿದ ವರ್ಗಗಳ ಎಲ್ಲಾ ನಿಗಮಗಳಿಗೂ ಹಣ ಬಿಡುಗಡೆ ಮಾಡಿಲ್ಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಇಲ್ಲ, ವಾಲ್ಮೀಕಿ ಹಗರಣ ಎಲ್ಲರಿಗು ಗೊತ್ತಿದೆ, ಪರಿಶಿಷ್ಟರಿಗೆ ಮೀಸಲಿಟ್ಟ ರಾಜ್ಯದ ಹಣವನ್ನು ತೆಲಂಗಾಣ ರಾಜ್ಯದ ಚುನಾವಣೆಗೆ ಬಳಸುತ್ತಾರೆ ಎಂದರೆ, ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳಿಗೆ ಹೈಕೋರ್ಟ್ ಹತ್ತು ದಿನದ ಸಮಯ ಕೊಟ್ಟಿರುವುದು ಅವರು ಆತ್ಮವಲೋಕನ ಮಾಡಿಕೊಳ್ಳಲು, ಈಗಲಾದರೂ ಈ ಹತ್ತು ದಿನದಲ್ಲಿ ಅವರು ತಮ್ಮನ್ನು ತಾವು ವಿಮರ್ಶಿಸಿಕೊಂಡು ರಾಜೀನಾಮೆಗೆ ಮುಂದಾಗಬೇಕು ಎಂದರು.
ರಾಜ್ಯದ ಕಾಂಗ್ರೆಸ್ ನಾಯಕರಿಗೆ ಕೇಂದ್ರದ ನಾಯಕರು ಕಿವಿ ಹಿಂಡುತ್ತಿಲ್ಲ. ಬದಲು ಅವರನ್ನು ಪ್ರೇರೆಪಿಸುವ ಮೂಲಕ ಭ್ರಷ್ಟಚಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಬೇಕೆಂಬ ಹಠವೇಕೆ? ಕಾಂಗ್ರೆಸ್‍ನಲ್ಲಿ ಬೇರೆ ಯಾರು ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯಿಂದ ರಾಜ್ಯಾದಾದ್ಯಂತ ಜಲಾಂದೋಲನವನ್ನು ಆರಂಭಿಸುತ್ತೇವೆ. ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಡುವುದು ಸೂಕ್ತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಜಗದೀಶ್, ಶ್ರೀನಾಗ್, ಮಂಜುನಾಥ್ ನವಿಲೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post