ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಸ್ಥಾಪನೆ ಸೇರಿದಂತೆ ಕೈಗಾರಿಕಾ ಉದ್ಯಮಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಶಿವಮೊಗ್ಗದ ಶ್ರೇಯೋಭಿವೃದ್ಧಿಗೆ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ Minister Madhu Bangarappa ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಆಯೋಜಿಸಿದ್ದ ಉದ್ಯಮಿಗಳ ಸಂವಾದ ಕಾರ್ಯಕ್ರಮದಲ್ಲಿ ಎಲ್ಲರ ಪರವಾಗಿ ಶಿವಮೊಗ್ಗ ಜಿಲ್ಲೆಯ ಕುರಿತಂತೆ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದಲ್ಲಿ ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಅವಶ್ಯಕತೆ ಇದ್ದು, ಯುವ ಜನರಿಗೆ ಅನುಕೂಲವಾಗಲಿದೆ. ಸ್ಟಾರ್ಟ್ಅಪ್ ಪ್ರೋತ್ಸಾಹ ಸೇರಿದಂತೆ ವಿವಿಧ ಪ್ರಯೋಜನ ಆಗಲಿದೆ. ಆರಂಭಿಸಲು ಉದ್ದೇಶಿಸಿರುವ ಉದ್ಯಮಶೀಲತೆ ಮತ್ತು ನಿರ್ವಹಣಾ ತರಬೇತಿ ಕೌಶಲ್ಯಾಭಿವೃದ್ಧಿ ಕೇಂದ್ರ ಯೋಜನೆಗೆ ಸರ್ಕಾರದಿಂದ ಮೂಲ ಬಂಡವಾಳ ಮಂಜೂರಾತಿ ಮತ್ತು ಸಂಪೂರ್ಣ ಸಹಕಾರ ನೀಡಬೇಕು.
ಶಿವಮೊಗ್ಗ ಜಿಲ್ಲೆಯಲ್ಲಿ “ಫುಡ್ ಪಾರ್ಕ್ ಸ್ಥಾಪನೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕಾ ಘಟಕ” ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸೋಗಾನೆ ಗ್ರಾಮ ವ್ಯಾಪ್ತಿಯಲ್ಲಿ 100 ಎಕರೆ ಜಾಗ ಗುರುತಿಸಲಾಗಿದೆ. ಕೆಐಎಡಿಬಿ ಮಂಜೂರಾಗಿರುವ 600 ಎಕರೆ ಜಾಗ ಅಭಿವೃದ್ಧಿಪಡಿಸುವುದು ಎಂದು ಮನವಿಯಲ್ಲಿ ಪ್ರಸ್ತಾಪಿಸಿದರು.
ಶಿವಮೊಗ್ಗ ಜಿಲ್ಲೆಗೆ ಆಯುಷ್ ವಿಶ್ವವಿದ್ಯಾಲಯ ಮಂಜೂರಾಗಿದ್ದು, ಮುಂದಿನ ಪ್ರಕ್ರಿಯೆಗಳು, ಕಾರ್ಯಕ್ರಮಗಳು ಪ್ರಾರಂಭವಾಗಬೇಕು. ಆಯುಷ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ಸರ್ಕಾರದಿಂದ ಒಬ್ಬ ಆಡಳಿತಾಧಿಕಾರಿ ನೇಮಕ ಮಾಡಿ ತುರ್ತಾಗಿ ಅನುದಾನ ಬಿಡುಗಡೆಗೊಳಿಸಬೇಕು.
Also read: ಸೊರಬ: ನ.6ರಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ನೇತೃತ್ವದಲ್ಲಿ ಜನತಾದರ್ಶನ
ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಆದ್ಯತೆ ನೀಡಬೇಕು. ಪ್ರವಾಸೋದ್ಯಮ ಸರ್ಕ್ಯೂಟ್ ರಚನೆ, ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅವಶ್ಯಕತೆ ಇದೆ. ಅಂತರ ರಾಜ್ಯ ಪ್ರವಾಸಿ ಸರ್ಕ್ಯೂಟ್ ರಚಿಸಬೇಕು. ಪ್ರವಾಸೋದ್ಯಮದ ಯೋಜನೆಯಲ್ಲಿ ಆಸಕ್ತಿ ಇರುವ ಹೂಡಿಕೆದಾರರನ್ನು ಆಕರ್ಷಿಸಲು “ಇನ್ವೆಸ್ಟರ್ ಮೀಟ್” ಕಾರ್ಯಕ್ರಮಕ್ಕೆ ಸಹಕರಿಸಬೇಕು.
ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ಪ್ರದೇಶವನ್ನು “ಮೈಸ್” ಕೇಂದ್ರವಾಗಿಸಿ ಜಿಲ್ಲಾಡಳಿತವು ಸಾಮಾಜಿಕ, ಸಾರ್ವಜನಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸಲು ಫ್ರೀಡಂಪಾರ್ಕ್ ಮಾದರಿಯಲ್ಲಿ ಸುಸಜ್ಜಿತಗೊಳಿಸಬೇಕು. ಇ ತ್ಯಾಜ್ಯ ವೈಜ್ಞಾನಿಕ ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಶಿವಮೊಗ್ಗ ನಗರದಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ದೇವಕಾತಿಕೂಪ್ಪ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಉಪಕೇಂದ್ರದ ಸ್ಥಾಪಿಸಬೇಕು. ಸ್ಯಾಟ್ ಲೈಟ್ ಮಾದರಿಯ ಸಿಟಿ ಬಸ್ ಸ್ಟಾö್ಯಂಡ್ ನಿರ್ಮಿಸಬೇಕು. ಮಹಾನಗರ ಪಾಲಿಕೆ ವತಿಯಿಂದ ಅಟೋಮೆಟೆಡ್ ಫ್ಲಾಟರ್‌ಹೌಸ್ ಘಟಕ ಸ್ಥಾಪಿಸಬೇಕು. ತುಂಗಾ ನದಿಯ ಸ್ವಚ್ಛತೆಗೆ ವಿಶೇಷ ಯೋಜನೆ ರೂಪಿಸಬೇಕು. ತುಂಗಭದ್ರಾ ಶುಗರ್ ಕಂಪನಿಯ ಜಾಗವನ್ನು ಕೈಗಾರಿಕಾ ವಸಹಾತು ಪ್ರದೇಶವಾಗಿ ಮಾರ್ಪಡಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಕೈಗಾರಿಕಾ ನೀತಿಗೆ ತಿದ್ದುಪಡಿ ತರಬೇಕು. ನಿಧಿಗೆ ಕೈಗಾರಿಕಾ ಟೌನ್‌ಶಿಪ್ ಮಾಡಬೇಕು. ಐಟಿ ಕಂಪೆನಿಗಳಗೆ ಪ್ರೋತ್ಸಾಹ ಮತ್ತು ಆದ್ಯತೆ ಕೊಡಬೇಕು. ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕರಿಸಬೇಕು. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಗರದ ಆಯ್ದ ಭಾಗಗಳಲ್ಲಿ ಕಿಯೋನಿಕ್ಸ್ ನಿರ್ಮಿಸುವ ಯೋಜನೆ ಕಾರ್ಯಗತಗೊಳಿಸಬೇಕು. ಶಿವಮೊಗ್ಗದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post