ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಸಲ್ಮಾನ ಹೆಣ್ಣು ಮಕ್ಕಳು ಕಾಲೇಜುಗಳಿಗೆ ಹಿಜಾಬ್ ಧರಿಸಿ ಬಂದು ವಸ್ತ್ರಸಂಹಿತೆಯ ಉದ್ದೇಶವನ್ನು ಬುಡಮೇಲು ಮಾಡುತ್ತಿದ್ದು ವಿದ್ಯಾಕೇಂದ್ರದಲ್ಲಿ ಸಮಾನತೆಯ ಭಾವನೆ ಮೂಡಿಸದೆ ವಿದ್ಯೆಗಿಂತಲೂ ಧರ್ಮವೇ ಹೆಚ್ಚು, ಎಂದಿಗೂ ಭಾವೈಕ್ಯತೆಗೆ ನಮ್ಮ ಗೌರವವಿಲ್ಲ. ಸಂವಿಧಾನಕ್ಕೆ ನಮ್ಮ ಗೌರವವಿಲ್ಲ ಎಂದು ಸಾಬೀತುಪಡಿಸುತ್ತಿದ್ದಾರೆ ಎಂದು ಎಸ್. ದತ್ತಾತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರ ಉದ್ದೇಶ ಜ್ಞಾನಸಂಪಾದನೆ ಆಗಿರುತ್ತದೆ, ಹಾಗೂ ಜೀವನದಲ್ಲಿ ಒಳ್ಳೆಯ ‘ಜಾಬ್’ ಹಿಡಿದು ಜೀವನ ಕಟ್ಟಿಕೊಳ್ಳುವ ಕನಸುಗಳೂ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ಇತ್ತೀಚಿಗೆ ಕೆಲವರಿಗೆ ‘ಜಾಬ್’ ಗಿಂತಲೂ ‘ಹಿಜಾಬ್’ ಎನ್ನುವುದೇ ಅವರ ಜೀವನದ ಪರಮಗುರಿಯೇನೋ ಎನ್ನುವ ಅನುಮಾನ ಕಾಡತೊಡಗಿದೆ. ಈ ವಿವಾದದ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುವುದು ವಸ್ತ್ರಸಂಹಿತೆಯ ಉಲ್ಲಂಘನೆ ಅನ್ನೋದಾದ್ರೆ, ಇತರ ವಿದ್ಯಾರ್ಥಿಗಳೂ ಕುಂಕುಮ, ಬಳೆ, ಜನಿವಾರ ಅಥವಾ ಲಿಂಗಧಾರಣೆ ಮಾಡಿಕೊಂಡು ಶಾಲೆಗೆ ಬರುವುದನ್ನು ಸರ್ಕಾರ ನಿಷೇಧಿಸಲಿ. ಶಾಲೆಗಳಲ್ಲಿ ಶಾರದಾ ಪೂಜೆ ಮಾಡುವುದನ್ನು ನಿಲ್ಲಿಸಲಿ. ಶಾಲೆಗಳಲ್ಲಿರುವ ಹಿಂದೂ ದೇವರುಗಳ ಫೋಟೋವನ್ನು ತೆಗೆಯಿರಿ ಈ ಮುಂತಾದ ಸಲಹೆಗಳನ್ನು ನ್ಯೂಸ್ ಚಾನೆಲ್ ಒಂದರ ಡಿಬೇಟ್ ನಲ್ಲಿ ಪಾಲ್ಗೊಂಡಿದ್ದ ಮುಸ್ಲಿಮ್ ಹೆಣ್ಣುಮಗಳೊಬ್ಬಳು ಪುಂಖಾನುಪುಂಖವಾಗಿ ನೀಡುತ್ತಾಳೆ. ಈ ವಾದಕ್ಕೆ ಹಲವು ಮುಸ್ಲಿಮರು ಹಾಗೂ ಕೆಲವು ಹಿಂದೂಗಳೂ ಅಹುದಹುದು ಎಂದು ತಲೆದೂಗುವವರಿದ್ದಾರೆ ಇದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಇಂತಹ ಮೂರ್ಖತನದ ವಾದವನ್ನು ಮಂಡಿಸುವ ಕೊಂಕು ಬುದ್ದಿಯ ಕೆಲ ಅಲ್ಪಸಂಖ್ಯಾತರಿಗೆ ಹಾಗೂ ಈ ವಾದವನ್ನು ಬೆಂಬಲಿಸುವ ಸ್ವಲ್ಪಸಂಖ್ಯಾತರಿಗೆ ಭರತಭೂಮಿಯ ಇತಿಹಾಸದ ಪುಟದಲ್ಲಿ ಸೇರಿರುವ, ನಾವು ಎಂದೂ ಮರೆಯದ ಕಹಿಸತ್ಯವೊಂದನ್ನು ಮತ್ತೊಮ್ಮೆ ಜ್ಞಾಪಿಸುವ ಪ್ರಯತ್ನ ಮಾಡೋದು ಅನಿವಾರ್ಯವಾಗಿದೆ ಎಂದು ಕುಟುಕಿದ್ದಾರೆ.
ಆಗಬಾರದಿದ್ದ ನಮ್ಮ ದೇಶವಿಭಜನೆ ಆಗಿಹೋಗಿದೆ. ಅದೂ ಕೂಡಾ ಧರ್ಮದ ಆಧಾರದಲ್ಲಿ. ಹಿಂದೂಗಳಿಗೆ ಹಿಂದುಸ್ಥಾನ, ಮುಸ್ಲಿಮರಿಗೆ ಪಾಕಿಸ್ಥಾನ. ತದನಂತರ ಪಾಕಿಸ್ತಾನ ಎನ್ನುವುದು ಹಿಂದೂಗಳಿಗೆ ಹಾಗೂ ಇತರ ಅಲ್ಪಸಂಖ್ಯಾತರಿಗೆ ನರಕವಾಯಿತು. ಭಾರತ ಎನ್ನುವುದು ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದ ಪರಿಣಾಮ ಅಲ್ಪಸಂಖ್ಯಾತರ ಸ್ವರ್ಗವಾಯಿತು. ಮೊನ್ನೆ ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನೊಬ್ಬನಿಗೆ ಬೆಂಕಿಹಚ್ಚಿ ಸಜೀವದಹನ ಮಾಡಲಾಯಿತು, ಅದರ ಬಗ್ಗೆ ಸಂತಾಪಸೂಚಿಸದ ಮೆಹಬೂಬಾ ಮಫ್ತಿ, ಉಡುಪಿಯ ವಿದ್ಯಾರ್ಥಿನಿಯರಿಗೆ ಹಿಜಾಬ್ ಗೆ ಅವಕಾಶ ಕೊಡದಿರುವುದನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ಈ ಇಬ್ಬಗೆಯ ನೀತಿಯನ್ನು ಮುಸ್ಲಿಮರನ್ನು ಓಲೈಸುವ ಲಜ್ಜೆಗೆಟ್ಟ ರಾಜಕಾರಣಿಗಳು ಮೊದಲಿನಿಂದಲೂ ಚಾಚೂತಪ್ಪದೆ ಅನುಸರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.
ಹಿಂದೂಸ್ಥಾನ ಎನ್ನುವುದು ನಿಂತಿರುವುದು ಹಿಂದೂಗಳ ಪಾರಂಪರಿಕ ಸಂಸ್ಕೃತಿ ಹಾಗೂ ನಮ್ಮ ಧಾರ್ಮಿಕ ನೆಲೆಗಟ್ಟಿನ ಆಧಾರದಮೇಲೆ. ತಿಲಕ, ಬಳೆ, ಕೇಸರಿಬಣ್ಣ ಹಾಗೂ ನಮ್ಮ ಇತರ ಭಾವತ್ಮಕ ಅಂಶಗಳನ್ನು ಪ್ರಶ್ನಿಸುವವರಿಗೆ ನಾವು ಬೇರೆಯದೇ ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಕುಂಕುಮವು ಭಾವನಾತ್ಮಕ ಅಷ್ಟೇ ಅಲ್ಲ ಅದೊಂದು ಅಲಂಕಾರಿಕ ವಸ್ತು. ಅಲಂಕಾರಿಕ ವಸ್ತುಗಳಿಗೂ, ಸಮವಸ್ತ್ರಕ್ಕೂ ವ್ಯತ್ಯಾಸ ಗೊತ್ತಿಲ್ಲವೇ? ಹಣೆಯ ತಿಲಕ, ಕೈ ಬಳೆ, ಗೆಜ್ಜೆ, ಉಗುರಿನ ಬಣ್ಣ, ಮದರಂಗಿ, ಕಾಡಿಗೆಗಳೆಲ್ಲ ಅಲಂಕಾರಿಕ ವಸ್ತುಗಳು. ತಲೆಯ ಮೇಲೆ ಹಾಕುವ ಬಟ್ಟೆಗಳು ಸಮವಸ್ತ್ರದ ಸಾಲಿಗೆ ಬರುತ್ತದೆ. ಹೀಗಿರುವಾಗ ತಿಲಕವನ್ನು ಹಿಜಾಬ್ ಗೆ ಹೋಲಿಸುವುದು ಎಲ್ಲಿಂದೆಲ್ಲಿಯ ವಾದ? ಎಂದಿದ್ದಾರೆ.
ನಮ್ಮ ದೇಶದಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸಿಗುವ ಪ್ರೋತ್ಸಾಹ ಹಾಗೂ ಅವರ ಸಾಮಾಜಿಕ ಜೀವನಕ್ಕೆ ಸಿಗುವಷ್ಟು ಗೌರವ ಈ ಪ್ರಪಂಚದಲ್ಲಿ ಇನ್ಯಾವ ದೇಶದಲ್ಲಿ ಸಿಗುತ್ತಿದೆ ಎನ್ನುವುದನ್ನು ಹಿಜಾಬ್ ವಿಚಾರದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರ ಹಿತಾಸಕ್ತಿಗಳ ರಕ್ಷಕರೆಂದು ಹೇಳಿಕೊಳ್ಳುತ್ತಿರುವ ಧಾರ್ಮಿಕ ಮುಖಂಡರು ಒಮ್ಮೆ ಪ್ರಶ್ನಿಸಿಕೊಳ್ಳಿ. ಶರಿಯಾ ಕಾನೂನು ಇರುವ ದೇಶಗಳಲ್ಲಿ ಮುಸ್ಲಿಂ ಮಹಿಳೆಯರ ಸಾಮಾಜಿಕ ಸ್ಥಾನಮಾನ ಏನಿದೆ ಎನ್ನುವುದು ಎಲ್ಲರಿಗೂ ಗೊತ್ತು ಎಂದಿದ್ದಾರೆ.
ತರಗತಿಗೆ ಹಿಜಾಬ್ ಹಾಕಿಕೊಂಡು ಹೋಗಿ ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಪಾಠ ಕೇಳುವ ಬದಲು ಹಾಡು ಕೇಳುತ್ತಾ ಕಾಲಹರಣ ಮಾಡುವವರಷ್ಟೇ ಹಿಜಾಬ್ ನೆಪದಲ್ಲಿ ತರಗತಿ ತಪ್ಪಿಸಿಕೊಂಡು ಕಾಲೇಜಿನಿಂದ ಹೊರಗೆ ನಿಂತಿದ್ದಾರೆ. ನಿಜವಾಗಿಯೂ ಕಲಿಯುವ ಬಯಕೆ ಇರುವವರು ಸಮವಸ್ತ್ರದಲ್ಲಿ ತರಗತಿಯಲ್ಲಿ ಕುಳಿತಿದ್ದಾರೆ. ವಿದ್ಯಾಕೇಂದ್ರಗಳಲ್ಲಿ ಕಡ್ಡಾಯವಾಗಿ ಹಿಜಾಬ್ ನಿಷೇಧಿಸಬೇಕು. ಅಲ್ಲಿನ ನಿಯಮ ಮತ್ತು ಅನುಶಾಸನದ ಜೊತೆಗೆ ಕಲಿಯುವುದು ಎಲ್ಲರ ಧರ್ಮ, ಶಾಲೆಯ ನಿಯಮದಡಿಯಲ್ಲೇ ಎಲ್ಲರೂ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post