ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ShivamoggaHindumahasabhaGanapathi ವಿಸರ್ಜನಾಪೂರ್ವ ಮೆರವಣಿಗೆಗೆ ಇಂದು ವೈಭವದ ಚಾಲನೆ ದೊರೆಯಿತು.
Also read: ನಿಖರ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಆತ್ಮವಿಶ್ವಾಸ ತುಂಬಿ: ಅಧಿಕಾರಿಗಳಿಗೆ ಕೃಷಿ ಸಚಿವರ ಸೂಚನೆ
ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಮಹಾಸಭಾ ಸೇರಿದಂತೆ ಹಿಂದು ಪರ ಸಂಘಟನೆ ಗಳ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಭಗವಾಧ್ವಜ ಹಿಡಿದು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು.
ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ಎಸ್‍ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಹೆಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿವೆ.
ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ.
ಗಣಪತಿ ಸಾಗುವ ರಸ್ತೆಯಲ್ಲಿ, ಮಹಿಳೆಯರ, ಯುವಕರ ನೃತ್ಯ ಗಮನಸೆಳೆಯುತಿತ್ತು. ಯುವತಿಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗೋಪಿ ವೃತ್ತದಲ್ಲಿ ಡಿಜೆ ಅಳವಡಿಸಲಾಗಿದ್ದು, ಸಂಗೀತಕ್ಕೆ ತಕ್ಕಂತೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು.
ಇನ್ನು ರಾಜಬೀದಿಯ ಮಾರ್ಗದಲ್ಲಿ ಯುವಕರ ದಂಡು ಬೈಕ್‍ಗಳಲ್ಲಿ ‘ಜೈ ಶ್ರೀರಾಮ್’ ಎಂದು ಕೂಗುತ್ತಾ ಸಾಗುತ್ತಿದ್ದರು. ಇನ್ನೂ ವಿಶೇಷವೆಂದರೆ ಗಣಪತಿಯ ರಾಜಬೀದಿ ಉತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್‍ಗಳನ್ನು ಮಾರ್ಗದುದ್ದಕ್ಕೂ ಪುನಿತ್‍ರಾಜ್‍ಕುಮಾರ್ ಭಾವಚಿತ್ರ ಹಾಕಲಾಗಿದೆ. ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳವರು ಗಣಪತಿಗೆ ಬೃಹತ್ ಹಾರಗಳನ್ನು ಹಾಕಲು ಸಿದ್ಧತೆ ನಡೆಸಿದ್ದರು
ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಟಿವಿ, ದಿವ್ಯದೃಷ್ಟಿ ಕಣ್ಗಾವಲು ಹಾಗೂ ಡ್ರೋಣ್ ಕ್ಯಾಮೆರಾಗಳಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿದೆ.
Also read: ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಲಾಜಿಸ್ಟಿಕ್ ಕೇಂದ್ರ ಸ್ಥಾಪಿಸಲು ಆಹ್ವಾನ: ಸಚಿವ ಎಂ. ಬಿ. ಪಾಟೀಲ
ಈದ್‍ಮಿಲಾದ್ Eid milad ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಸಹ ಇದ್ದು, ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ರಜೆ ಇರುವುದರಿಂದ ಹೆಚ್ಚಿನ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಮಕ್ಕಳು, ಹೆಣ್ಣುಮಕ್ಕಳು, ಭಾಗವಹಿಸಿದ್ದರು ವಿಶೇಷವಾಗಿತ್ತು. ಪುಟ್ಟ ಮಕ್ಕಳು ತಮ್ಮ ಪೋಷಕರ ಹೆಗಲೇರಿ ಮೆರವಣಿಗೆ ವೀಕ್ಷಿಸಿದ್ದು ವಿಶೇಷವಾಗಿತ್ತು. ಒಟ್ಟಾರೆಯಾಗಿ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯುತ್ತಿರುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಶಾಂತಿಯುತವಾಗಿ ಸಾಗಿತ್ತು.
ಈ ಬಾರಿ ವಿಶೇಷತೆಗಳು:
- ಕೆಎ-14 ಕನ್ನಡಿಗ ಸಂಘಟನೆಯಿಂದ ಕಾವೇರಿ ನಮ್ಮ ಸ್ವಾಭಿಮಾನ, ಮಹದಾಯಿ ಜೀವದಾನ, ಗಡಿನಾಡು ನಮ್ಮ ಪ್ರಾಣ ಎಂಬ ಬರಹವುಳ್ಳ ಬ್ಯಾನರ್ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
- ಮುಫ್ತಿಯಲ್ಲಿ ಇದ್ದ ಪೊಲೀಸರು ಈ ಬಾರಿ ವಿವಿಧ ವೇಷಧಾರಿಗಳಾಗಿ ಮೆರವಣಿಗೆ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
- ಸಂಘ-ಸಂಸ್ಥೆಗಳಿಂದ ಮೆರವಣಿಗೆಯಲ್ಲಿ ಸಾಗಿಬಂದವರಿಗೆ ನೀರು, ಮಜ್ಜಿಗೆ, ಲಘು ಉಪಾಹಾರ, ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
- ಮಹಿಳೆಯರು, ಮಕ್ಕಳು, ಯುವಕ ಯುವತಿಯರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಲ್ಲದೆ ನೃತ್ಯ ಕೂಡ ಮಾಡಿದರು.
- ವಿವಿಧ ಜಾನಪದ ಕಲಾತಂಡಗಳು ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದ ಮೆರವಣಿಗೆಗೆ ಮೆರುಗು ತಂದವು.
- ಪೊಲೀಸ್ ಇಲಾಖೆ ಇಡೀ ನಗರದಲ್ಲಿ, ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸರ್ಪಗಾವಲು ಹಾಕಿತ್ತು. ಮೆರವಣಿಗೆ ಸಾಗುವ ಮುಖ್ಯ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಸಂಪರ್ಕ ರಸ್ತೆಗಳಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು.
- ಪೊಲೀಸರೊಂದಿಗೆ ಈ ಬಾರಿ ಸಾರ್ವಜನಿಕರು ಕೂಡ ಬಂದೋಬಸ್ತ್ ಕಾರ್ಯದಲ್ಲಿ ಕೈಜೋಡಿಸಿದ್ದರು.
- ಶಿವಪ್ಪ ನಾಯಕ ವೃತ್ತದಲ್ಲಿ ನಿರ್ಮಿಸಿರುವ ಹನುಮಂತನ ಪ್ರತಿಮೆಗೆ ಫ್ಲವರ್ ಡೆಕೋರೇಷನ್ ಸಂಘದ ವತಿಯಿಂದ ಅತ್ಯಾಕರ್ಷಕ ಹೂವಿನ ಅಲಂಕಾರ ಮಾಡಲಾಗಿತ್ತು.
- ಎಎ ಸರ್ಕಲ್‍ನಲ್ಲಿ ನಿರ್ಮಿಸಿದ್ದ ಚಂದ್ರಯಾನ-3 ಪ್ರತಿಕೃತಿಯ ಮೇಲೆ ಹಿಂದೂ ರಾಷ್ಟ್ರ ಹೆಸರಿನ ಕೇಸರಿ ಧ್ವಜ ರಾರಾಜಿಸುತ್ತಿತ್ತು.
- ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತು ಸಂಗಡಿಗರು ಬಸವೇಶ್ವರ ದೇವಸ್ಥಾನದ ಬಳಿ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಸದಸ್ಯ ಹೆಚ್.ಸಿ.ಯೋಗೇಶ್ 350ಕೆಜಿ ತೂಕದ ಕೊಬ್ಬರಿ ಹಾರವನ್ನು ಗಣಪನಿಗೆ ಅರ್ಪಿಸಿದರು.
- ಎಎ ಸರ್ಕಲ್‍ನಲ್ಲಿ ವೀರ ಸಾವರ್ಕರ್ ಸೇನೆ ವತಿಯಿಂದ ವೀರ ಸಾವರ್ಕರ್ ಭಾವಚಿತ್ರದ ವಿಶೇಷ ಬ್ಯಾನರ್ ಹಾಕಲಾಗಿತ್ತು. ಕೇಸರಿ ಪೇಟ ಮತ್ತು ಶಾಲಿಗೆ ಭಾರೀ ಡಿಮ್ಯಾಂಡ್ ಇದ್ದು, ಮಾರಾಟ ಜೋರಾಗಿತ್ತು.
- ಮುಫ್ತಿಯಲ್ಲಿದ್ದ ಮಹಿಳಾ ಮತ್ತು ಪುರುಷ ಪೊಲೀಸರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಜೊತೆಯೇ ತಾವೂ ಸಾಗಿ ನೃತ್ಯ ಮಾಡುತ್ತಾ ಮೆರವಣಿಗೆ ಮುಂದೆ ಸಾಗಲು ಅನುವು ಮಾಡಿಕೊಡುತ್ತಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post