ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ಬೆಂಗಳೂರು ಹೊರತುಪಡಿಸಿ ಇಡೀ ರಾಜ್ಯದಲ್ಲೇ ಅತಿ ವಿನೂತನ ಶಸ್ತ್ರಚಿಕಿತ್ಸೆಯೊಂದನ್ನು ನೆರವೇರಿಸುವಲ್ಲಿ ನಗರದ ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದು, ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲು ಸ್ಥಾಪಿಸಿದ್ದಾರೆ.
ಹೌದು… ಥೈರಾಯ್ಡ್’ಗೆ ಸಂಬಂಧಿಸಿದ ಟ್ರಾನ್ಸ್ ಓರಲ್ ಎಂಡೋಸ್ಕೋಪಿಕ್ ಥೈರಾಯ್ಡೆಕ್ಟಮಿ ವೆಸ್ಟಿಬುಲರ್ ಅಪ್ರೋಚ್(ಟಿಒಇಟಿವಿಎ) ಎಂಬ ಅತ್ಯಂತ ಸುಧಾರಿತ ಶಸ್ತ್ರಚಿಕಿತ್ಸೆಯನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಬೆರಳೆಣಿಕೆಯಷ್ಟು ವೈದ್ಯರಷ್ಟೇ ಇದುವರೆಗೂ ನೆರವೇರಿಸಿದ್ದಾರೆ. ಆದರೆ, ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಇಂತಹ ಸಾಧನೆ ಮಾಡಿರುವುದು ಇದೇ ಮೊದಲು.
ಟಿಒಇಟಿವಿಎ ಎಂದರೇನು?
ಥೈರಾಯ್ಡ್ ಸಮಸ್ಯೆಗಾಗಿ ಸಾಮಾನ್ಯವಾಗಿ ಕುತ್ತಿಗೆ ಭಾಗದಲ್ಲಿ ಚರ್ಮವನ್ನು ಕೊಯ್ದು ಶಸ್ತ್ರಚಿಕಿತ್ಸೆ ನಡೆಸಿ, ಹೊಲಿಗೆ ಹಾಕಲಾಗುತ್ತದೆ. ಆದರೆ, ಶಸ್ತ್ರಚಿಕಿತ್ಸೆಯಾದ ಭಾಗದಲ್ಲಿ ಕಲೆ ಅಥವಾ ಗುರುತು ಉಳಿದುಬಿಡುತ್ತದೆ. ಇದು ಚಿಕ್ಕ ವಯಸ್ಸಿನ ಯುವತಿಯರಲ್ಲಿ, ರೂಪದರ್ಶಿಗಳಿಗೆ ಹಾಗೂ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯುಳ್ಳವರಿಗೆ ಸಮಸ್ಯೆಯಾಗಿ ಕಾಡುತ್ತದೆ.
ಈ ಸಮಸ್ಯೆ ಹೋಗಲಾಡಿಸಲು ಕುತ್ತಿಗೆ ಹೊರತುಪಡಿಸಿ ಬೇರೆ ಭಾಗದಿಂದ ರಿಮೋಟ್ ಆಕ್ಸಿಸ್ ಸರ್ಜರಿ ಎಂಬ ವಿಧಾನದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಆ ಭಾಗದಲ್ಲೂ ಕಲೆ ಉಳಿಯುವ ಜೊತೆಯಲ್ಲಿ ಕೆಲವು ಅಡ್ಡಪರಿಣಾಮಗಳು ಕಾಣಿಸಿಕೊಂಡವು. ಹೀಗಾಗಿ, ಇದರಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದರ ಪರಿಣಾಮ ಈಗ ಅನುಸರಿಸುತ್ತಿರುವ ಟಿಒಇಟಿವಿಎ ವಿಧಾನವಾಗಿದೆ.
ಇದರಲ್ಲಿ, ದೇಹದ ಸ್ವಾಭಾವಿಕ ರಂಧ್ರಗಳ ಮೂಲಕ ದರ್ಶಕಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ (NOTES- Natural Orifice Transluminal Endoscopic Surgery). ಬಾಯಿಯ ವಸಡು ಹಾಗೂ ತುಟಿಯ ನಡುವಿನ ಕೆಳ ವಸಡಿನಲ್ಲಿ 1 ಸೆಮೀ ಹಾಗೂ ಅರ್ಧ ಸೆಮೀ ಭಾಗದಷ್ಟು ರಂಧ್ರ ಕೊರೆಯಲಾಗುತ್ತದೆ. ಆನಂತರ ಚರ್ಮದ ಕೆಳಭಾಗದಲ್ಲಿ ಸಣ್ಣ ಕೊಳವೆ ಹೋಗುವ ರೀತಿ ಮಾಡಿ, ಕುತ್ತಿಗೆಯ ಮೂಲಕ ಥೈರಾಯ್ಡ್ ತಲುಪಿ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯಲಾಗುತ್ತದೆ.
ಈ ವಿಧಾನದ ಪ್ರಯೋಜನಗಳೇನು?
ಇದು ಪ್ರಪಂಚದಲ್ಲಿ ಅತ್ಯಂತ ಸುಧಾರಿತ ವಿಧಾನವಾಗಿದೆ. ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರೆ ಯಾವುದೇ ಭಾಗದಲ್ಲಿ ಕಲೆ ಅಥವಾ ಗುರುತು ಉಳಿಯುವುದಿಲ್ಲ. ಬಾಯಿಯ ಒಳಭಾಗದಲ್ಲಿ ರಂಧ್ರ ಮಾಡಿದ ಜಾಗದಲ್ಲಿ ಹಾಕುವ ಸಣ್ಣ ಹೊಲಿಗೆ ತಾನಾಗಿಯೇ ಕರಗಿ ಹೋಗುವುದರಿಂದ ಹೊಲಿಗೆ ತೆಗೆಸಬೇಕು ಎಂಬ ಸಮಸ್ಯೆಯಿಲ್ಲ. ಅತಿ ಕಡಿಮೆ ನೋವು ನೀಡುವ ಈ ವಿಧಾನದಲ್ಲಿ ಚಿಕಿತ್ಸೆ ಮಾಡಿಕೊಂಡರೆ 1-2 ದಿನದ ಒಳಗಾಗಿ ಆಸ್ಪತ್ರೆಯಿಂದ ಮನೆಗೆ ತೆರಳಬಹುದಾಗಿದೆ.
ಥೈರಾಯ್ಡ್ ಶಸ್ತ್ರಚಿಕಿತ್ಸೆಯಲ್ಲಿ ಇದು ಅತ್ಯಂತ ಸುಧಾರಿತವಾದ ವಿಧಾನವಾಗಿದ್ದು, ನಮ್ಮ ಆಸ್ಪತ್ರೆಯಲ್ಲಿ ನಡೆಸಲಾದ ಇದು ಸಂಪೂರ್ಣ ಯಶಸ್ವಿಯಾಗಿದೆ. ಚಿಕ್ಕಮಗಳೂರಿನ 17 ವರ್ಷದ ಬಾಲಕಿಗೆ ಥೈರಾಯ್ಡ್ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಆಕೆ ಹಾಗೂ ಅವರ ಕುಟುಂಬಸ್ಥರು ಶಸ್ತ್ರಚಿಕಿತ್ಸೆಯ ಬಗ್ಗೆ ಕೊಂಚ ಆತಂಕಗೊಂಡಿದ್ದರು. ಆದರೆ, ಈ ನೂತನ ವಿಧಾನದ ಬಗ್ಗೆ ಸಂಫೂರ್ಣವಾಗಿ ತಿಳಿಸಿದ ನಂತರ ಒಪ್ಪಿಕೊಂಡರು. ಆಕೆಗೆ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಅದಾದ ಅರ್ಧ ಗಂಟೆಯಲ್ಲಿಯೇ ಆಕೆ ಮಾತನಾಡಲು ಆರಂಭಿಸಿದರು. ಮೊದಲ ದಿನ ಕೇವಲ ದ್ರವ ರೂಪದ ಆಹಾರ ಕೊಡಲಾಗಿದ್ದು, ಮರುದಿನದಿಂದ ಸಾಮಾನ್ಯ ಆಹಾರವನ್ನು ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಡೇ ಕೇರ್ ರೀತಿಯಲ್ಲಿ ಕೇವಲ ೨೪ ಗಂಟೆಗಳ ಅವಧಿಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಹಿಂತಿರುಗಬಹುದಾಗಿದೆ.
-ಡಾ.ಶ್ರೇಯಾಂಸ ಎಂ, ಎಂಡೋಕ್ರೈನ್ ಮತ್ತು ಆಂಕೋಪ್ಲಾಸ್ಟಿಕ್ ಸ್ತನ ಶಸ್ತ್ರಚಿಕಿತ್ಸಕ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ವೈದ್ಯರು ವಹಿಸಬೇಕಾದ ಎಚ್ಚರಿಕೆಗಳೇನು?
ಬಾಯಿಯ ಮೂಲಕ ಕುತ್ತಿಗೆಯಲ್ಲಿ ನಡೆಸುವ ಅತಿ ಸುಧಾರಿತ ಶಸ್ತ್ರಚಿಕಿತ್ಸೆಯಾದ ಇದನ್ನು ಅತ್ಯಂತ ಪರಿಣಿತಿ ಹೊಂದಿರುವ ವೈದ್ಯರು ಮಾತ್ರ ನೆರವೇರಿಸಬೇಕು. ಚಿಕಿತ್ಸೆಯ ವೇಳೆ ಯಾವುದೇ ಸೂಕ್ಷ್ಮ ಅಂಗಗಳಿಗೆ ಹಾನಿಯಾಗದಂತೆ ನಡೆಸುವ ಅಗತ್ಯವಿದ್ದು ಭಾರೀ ಜಾಗ್ರತೆ ವಹಿಸಬೇಕಿರುತ್ತದೆ. ಕನಿಷ್ಠ 200 ರಿಂದ 300ರಷ್ಟು ಥೈರಾಯ್ಡ್ ಶಸ್ತ್ರಚಿಕಿತ್ಸೆ ನಡೆಸಿ ಅನುಭವ ಇರುವ ವೈದ್ಯರು ಇದರ ಪ್ರಯೋಗ ಮಾಡಬಹುದು.
ರೋಗಿಗಳು ವಹಿಸಬೇಕಾದ ಎಚ್ಚರಿಕೆಗಳೇನು?
ಈ ಶಸ್ತ್ರಚಿಕಿತ್ಸೆಗೆ ಒಳಗಾದವರು ಬಾಯಿಯ ಶುಚಿತ್ವವನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಯಾವುದೇ ರೀತಿಯ ಆಹಾರ ಸೇವಿಸಿದ ನಂತರ ಸ್ವಚ್ಛವಾಗಿ ಬಾಯಿಯನ್ನು ಶುಭ್ರಗೊಳಿಸಿ, ಇನ್ಪೆಕ್ಷನ್ ಆಗದಂತೆ ಜಾಗ್ರತೆ ವಹಿಸಬೇಕು. ಆರಂಭದಲ್ಲಿ ಒಂದೆರಡು ದಿನ ದ್ರವ ಆಹಾರ ಸೇವಿಸಿ, ಆನಂತರ ಸಾಮಾನ್ಯ ಆಹಾರ ತೆಗೆದುಕೊಳ್ಳಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post