ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡುವುದು, ಬಿಡುವುದು ಕೇಂದ್ರದ ಮುಖಂಡರಿಗೆ ಬಿಟ್ಟ ವಿಚಾರ. ವಿಸ್ತರಣೆಯಾದರೆ ಖಂಡಿತ ಕರ್ನಾಟಕ ರಾಜ್ಯದ ಒಂದೆರಡು ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ಅವಕಾಶ ಇದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಸ್ಥಾನ ಇದೆ. ರಾಜ್ಯಕ್ಕೆ ಒಂದೆರೆಡು ಸಚಿವ ಸ್ಥಾನ ಮಾಡಿಕೊಡಬೇಕೆಂಬ ಪ್ರಾರ್ಥನೆಯನ್ನು ನಾನು ಮಾಡುತ್ತೇನೆ. ನಾವು ಪ್ರಾರ್ಥನೆ ಮಾಡುವುದಕ್ಕಿಂತ ಮೊದಲೇ ನಮ್ಮ ನಾಯಕರು ಈ ಬಗ್ಗೆ ತೀರ್ಮಾನಿಸಿರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಚಿವ ಸಿ.ಪಿ. ಯೋಗಿಶ್ವರ್ ದೆಹಲಿಗೆ ತೆರಳಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಯಾರು ಬೇಕಾದರೂ ದೆಹಲಿಗೆ ಹೋಗಬಹುದು. ನೀವು ಬೇಕಾದರೂ ಹೋಗಬಹುದು. ದೆಹಲಿಗೆ ಹೋಗಬಾರದು ಅಂತಾ ಏನಾದರೂ ಇದೆಯೇ? ದೆಹಲಿಗೆ ಹೋಗಬಾರದು ಎಂದು ಸಂವಿಧಾನದಲ್ಲಿ ಬರೆದಿದೆಯಾ? ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು.
ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ದೆಹಲಿಗೆ ತೆರಳಿದರೆ ನನ್ನನ್ನು ಪ್ರಶ್ನೆ ಕೇಳಿದರೆ ಹೇಗೆ? ಸಚಿವ ಯೋಗಿಶ್ವರ್ ದೆಹಲಿಗೆ ಹೋದರೆ ಏಕೆ ವಿಶೇಷ ಅರ್ಥ ಕಲ್ಪಿಸುತ್ತಿರಾ. ಬಸವನಗೌಡ ಪಾಟೀಲ್ ಯತ್ನಾಳ್ ಯಾಕೆ ದೆಹಲಿಗೆ ಹೋಗಿದ್ದಾರೆ, ಬಿ.ವೈ. ವಿಜಯೇಂದ್ರ ಏಕೆ ಹೋಗಿದ್ದಾರೆ ಅಂತಾ ನನ್ನನ್ನು ಪ್ರಶ್ನಿಸಿದರೆ ಹೇಗೆ? ಅದಕ್ಕೆ ನಾನೇನು ಹೇಳಲಿ? ಅವರಿಗೇನೋ ದೆಹಲಿಯಲ್ಲಿ ಕೆಲಸವಿರುತ್ತದೆ. ಪಕ್ಷದ ಮುಖಂಡರನ್ನು ಆ ಸಂದರ್ಭದಲ್ಲಿ ಭೇಟಿ ಮಾಡುತ್ತಾರೆ. ಅದಕ್ಕೆ ಏಕೆ ವಿಶೇಷತೆ ನೀಡಬೇಕು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post