ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ಮೋದಿ ಅವರ ಗ್ಯಾರಂಟಿಗಳು ಹುಸಿಯಾಗಿದ್ದು, ಕಾಂಗ್ರೆಸ್ ಗ್ಯಾರಂಟಿಗಳೇ ನಿಜವಾಗಿರುವುದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ಅವರ ಗ್ಯಾರಂಟಿಗಳಲ್ಲಿ ಬಿಜೆಪಿಯ ಹೆಸರೇ ಇಲ್ಲ. ಆ ಗ್ಯಾರಂಟಿಗಳೆಲ್ಲಾ ಸುಳ್ಳು ಎಂಬುದು ಈಗಾಗಲೇ ಜನರಿಗೆ ಗೊತ್ತಾಗಿದೆ. ರಾಜ್ಯದ ಗ್ಯಾರಂಟಿಗಳ ಜೊತೆಗೆ ಕೇಂದ್ರ ಕಾಂಗ್ರೆಸ್ ನ ಗ್ಯಾರಂಟಿಗಳು ಕೂಡ ಸೇರಿ ಈ ಬಾರಿ ಕಾಂಗ್ರೆಸ್‍ಗೆ ಗೆಲುವಾಗಲಿದೆ. ರಾಜ್ಯದಲ್ಲಿ ಎಲ್ಲಾ 28 ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದರು.

ಚುನಾವಣೆಗೂ ಮೊದಲು ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದರು. ಯಾವ ಆಧಾರದಲ್ಲಿ ಹಾಗೆ ಹೇಳುತ್ತಿದ್ದರೋ ಗೊತ್ತಿಲ್ಲ. ಆದರೆ ಈಗ 20 ರಿಂದ 24 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಇದರಿಂದಲೇ ಅವರು ಗೆಲ್ಲುವುದಿಲ್ಲ ಎಂಬುದು ಗೊತ್ತಾಗುತ್ತದೆ. ಶಿವಮೊಗ್ಗದಲ್ಲಿಯೂ ಗೀತಾ ಶಿವರಾಜ್‍ಕುಮಾರ್ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Also read: ಶಿವಮೊಗ್ಗ | ಕೆ.ಎಸ್. ಈಶ್ವರಪ್ಪ ಕಚೇರಿ ಮುಂದೆ ವಾಮಾಚಾರ | ಮಾಜಿ ಡಿಸಿಎಂ ಆರೋಪ ಯಾರ ವಿರುದ್ಧ?
ಹತ್ತು ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಏನನ್ನೂ ಮಾಡಲಿಲ್ಲ. ಬೆಲೆ ಏರಿಸಿದ್ದನ್ನು ಬಿಟ್ಟರೆ ಮತ್ತೇನೂ ಇಲ್ಲ. ಉದ್ಯೋಗಗಳು, ಸೃಷ್ಟಿಯಾಗಲಿಲ್ಲ. ಕಪ್ಪು ಹಣ ತರಲಿಲ್ಲ, ಮಣಿಪುರದ ಘಟನೆ ಬಗ್ಗೆ ಅನುಕಂಪ ತೋರಿಸಲಿಲ್ಲ. ಮಹಿಳಾ ಕುಸ್ತಿಪಟುಗಳಿಗೆ ಅನ್ಯಾಯವಾದಾಗ ಮಾತನಾಡಲಿಲ್ಲ. ಪಾಕಿಸ್ತಾನದ ಬಗ್ಗೆ ಮಾತನಾಡುವ ಮೋದಿ ಅವರು ಚೀನಾದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ನಾವು ಭ್ರಷ್ಟರು ಎಂದವರನ್ನು ಯಾಕೆ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಗುರುವಾರ ನಗರಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post