ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಮಾನವ ಸಂಪನ್ಮೂಲ ವ್ಯವಸ್ಥಾಪಕರಾಗಿದ್ದ ಕೆ.ಎಸ್. ನಾಗರಾಜ್ (71) ಅವರು, ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಆಸ್ಪತ್ರೆಯ ಮುಖ್ಯಸ್ಥರು ಕಂಬನಿ ಮಿಡಿದಿದ್ದಾರೆ.
ಆಸ್ಪತ್ರೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶೈಕ್ಷಣಿಕ ನಿರ್ದೇಶಕ ಡಾ. ಆರ್.ಪಿ. ಪೈ, ತಮ್ಮ ಸಂಸ್ಥೆ ಕಂಡಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಲ್ಲಿ ನಾಗರಾಜ್ ಅವರು ಸಹ ಒಬ್ಬರು. ಇವರ ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕಂಬನಿ ಮಿಡಿದರು.
ಕಾಲೇಜಿನ ಟ್ರಸ್ಟಿ ಡಾ. ವಿನಯಾ ಶ್ರೀನಿವಾಸ್ ಮಾತನಾಡಿ, ಸಂಸ್ಥೆಯ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದ್ದ ನಾಗರಾಜ್ ಅವರ ಕರ್ತವ್ಯ ಪರತೆ, ಶಿಸ್ತು, ಸಮಯ ಪ್ರಜ್ಞೆ ನಮಗೆಲ್ಲಾ ಮಾದರಿಯಾಗಿದೆ. ಇವರ ನಿಧನ ನಮ್ಮ ಸಂಸ್ಥೆಗೆ ಉಂಟಾಗಿರುವ ಅತಿದೊಡ್ಡ ನಷ್ಟವಾಗಿದೆ ಎಂದು ದುಃಖತಪ್ತ ಮಾತುಗಳನ್ನಾಡಿದರು.
ಮೆಡಿಕಲ್ ಸುಪರಿನ್‌ಟೆಂಡೆಂಟ್ ಡಾ. ನಂದಕಿಶೋರ್ ಲಾವಟೆ ಮಾತನಾಡಿ, ನಾಗರಾಜ್ ಅವರ ಸಮಯಪ್ರಜ್ಞೆ, ಕರ್ತವ್ಯಪರತೆ ನಮಗೆಲ್ಲಾ ಮಾದರಿಯಾದುದು. ಸಂಸ್ಥೆಯ ಏಳ್ಗೆಗಾಗಿ ಇವರ ಸೇವೆ ಅನನ್ಯವಾದುದು. ಇವರ ಕಾರ್ಯವೈಖರಿ ತಮಗೆಲ್ಲಾ ಮಾರ್ಗದರ್ಶವಾಗಿದೆ ಎಂದು ಕಂಬನಿ ಮಿಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಉಪಪ್ರಾಂಶುಪಾಲ ಸಿದ್ದಲಿಂಗಪ್ಪ, ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post