ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಈಗಾಗಲೇ ಪೊಲೀಸ್ ಇಲಾಖೆ ಕ್ಲೀನ್‍ಚಿಟ್ ನೀಡಿದೆ. ಆದರೆ, ಈಗ ಪೊಲೀಸ್ ಬಿ.ರಿಪೋರ್ಟ್ ಅನ್ನು ಸಂತೋಷ್ ಕುಟುಂಬ ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಅದು ಅವರ ಹಕ್ಕು. ಕೋರ್ಟ್ ಕೂಡ ನನಗೆ ಕ್ಲೀನ್ ಚಿಟ್ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ K S Eshwarappa ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆಪಾದನೆ ಬಂದ ಸಂದರ್ಭದಲ್ಲಿ ವಾಟ್ಸ್‌ಅಪ್ ಸಂದೇಶದಲ್ಲಿ ತಮ್ಮ ಹೆಸರು ಪ್ರಸ್ತಾಪ ಆಗಿದೆ ಎಂದು ಮುಖ್ಯಮಂತ್ರಿಗಳು ನನ್ನ ಗಮನಕ್ಕೆ ತಂದಕೂಡಲೇ ನಾನು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ತೆಗೆದುಕೊಳ್ಳಿ ಎಂದು ತಿಳಿಸಿದ್ದೆ. ನನಗೂ ಸಂತೋಷ್ ಪಾಟೀಲ್‌ಗೂ ಯಾವುದೇ ಸಂಬಂಧ ಇಲ್ಲ. ತನಿಖಾ ವರದಿಯಲ್ಲಿ ಎಲ್ಲಾ ವಿವರಗಳು ಇವೆ. ಆದಷ್ಟು ಬೇಗ ಈ ಪ್ರಕರಣದ ತೀರ್ಮಾನ ಆಗಲಿ, ನನಗೂ ಬೇಗ ನ್ಯಾಯ ಸಿಗಲಿ ಎಂದು ವಿನಂತಿಸುತ್ತೇನೆ ಎಂದು ಹೇಳಿದರು.
ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲೂ ಸಚಿವ ಕೆ.ಜೆ. ಜಾರ್ಜ್ ಮೇಲೆ ಇದೇ ರೀತಿ ಆರೋಪ ಬಂದಾಗ ನಾವೇ ರಾಜೀನಾಮೆಗೆ ಒತ್ತಾಯಿಸಿದ್ದೆವು. ಬಳಿಕ ಬಿ.ರಿಪೋರ್ಟ್ ಬಂದಮೇಲೆ ಅವರು ಮತ್ತೆ ಸಚಿವರಾಗಿದ್ದರು. ವಿರೋಧ ಪಕ್ಷಗಳು ಆಗಾಗ ಬೇರೆ ಬೇರೆ ಆಪಾದನೆ ಮಾಡುತ್ತಿರುತ್ತವೆ. ಕೋರ್ಟ್ ಪೂರ್ಣ ಪರಿಶೀಲನೆ ನಡೆಸಿ ಬೇಗ ತೀರ್ಮಾನ ಕೊಡುತ್ತದೆ ಎಂದು ತಮಗೆ ವಿಶ್ವಾಸವಿದೆ. ನಾನು ಸಂಪುಟ ಸೇರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯಾರೇ ಪ್ರಯತ್ನ ಮಾಡಿದರೂ ಯಶಸ್ಸು ಸಿಗಲ್ಲ. ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಬರುತ್ತೇನೆ ಎಂದರು.
Also read: Govt Keen to Attract More Private Firms into Mineral Exploration: Pralhad Joshi
ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದಂತೆ ಹಿಂದೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ವಿಶ್ವದಲ್ಲಿ ನೂರಾರು ಕೃಷ್ಣ ದೇವಾಲಯಗಳಿವೆ. ಆದರೆ, ಕೃಷ್ಣಮಠಕ್ಕೆ ಅತ್ಯಂತ ಮಹತ್ವವಿದೆ. ಕನಕದಾಸನ ಭಕ್ತಿಗೆ ಮೆಚ್ಚಿ ಗೋಡೆ ಒಡೆದು ಕನಕನಿಗೆ ದರ್ಶನ ನೀಡಿದ ಪುಣ್ಯಕ್ಷೇತ್ರ ಉಡುಪಿ. ಶ್ರೀಕೃಷ್ಣ ದರ್ಶನಕ್ಕೆ ಸಿದ್ದರಾಮಯ್ಯ ಹೋಗಿ ದೇವರ ಆಶೀರ್ವಾದ ಪಡೆದು ಬರಲಿ ಎಂದು ಹಾರೈಸುತ್ತೇನೆ ಎಂದರು.
ಸಾವರ್ಕರ್ ಬಗ್ಗೆ ಟೀಕೆ ಮಾಡುವುದಕ್ಕಿಂತ ಘೋರ ಅಪರಾಧ ಮತ್ತೊಂದಿಲ್ಲ. ಎರಡು ಬಾರಿ ಕರಿನೀರಿನ ಶಿಕ್ಷೆಗೆ ಗುರಿಯಾಗಿ 14 ವರ್ಷ ಜೈಲಿನಲ್ಲಿದ್ದ ದೇಶಪ್ರೇಮಿ ಸಾವರ್ಕರ್ ವಿರುದ್ಧ ಆಪಾದನೆ ಮಾಡುತ್ತಿರುವವರು ಒಮ್ಮೆ ಅಂಡಮಾನ್ ಜೈಲಿನ ಶೆಲ್ ಅನ್ನು ನೋಡಿಬರಲಿ. ಈ ದೇಶದಲ್ಲಿ ಸಾವರ್ಕರ್ ವಿರುದ್ಧ ಚರ್ಚೆ ಮಾಡುವುದೇ ರಾಷ್ಟ್ರದ್ರೋಹದ ಕೆಲಸ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















