ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕಿದೆ. ತಾಯಿ ನಾಡು, ಮಾತೃ ಭಾಷೆ ಮರೆತರೆ ಸಂಸ್ಕೃತಿ ಮರೆತಂತೆ. ಇವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಮುಂದಾಗಬೇಕು. ಮುಖ್ಯವಾಗಿ ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮ ಶಾಲೆಗಳಿಂದ ಸಂಸ್ಕೃತಿ ಉಳಿಯುತ್ತದೆ ಎಂದು ಖ್ಯಾತ ಚಿತ್ರ ನಟ ದೊಡ್ಡಣ್ಣ ಹೇಳಿದರು.
ಇಂದು ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಂದ ಒಂದಿಷ್ಟು ಸಂಸ್ಕತಿ ಉಳಿಯುವ ಸಾಧ್ಯತೆ ಇದೆ. ಅವರು ತಂದೆ, ತಾಯಿ, ಗುರು, ಹಿರಿಯರಿಗೆ ಗೌರವ ನೀಡುತ್ತಾರೆ. ಕಾನ್ವೆಂಟ್ ಮಕ್ಕಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲದೇ ಕನ್ನಡ ಕವಿಗಳಾದ ಪಂಪ, ರನ್ನ, ಪೊನ್ನ, ಜನ್ನ, ರಾಘವಾಂಕ ಹಾಗೂ ಕುವೆಂಪು ಮತ್ತು ವಚನ ಸಾಹಿತ್ಯಗಳು, ಬೇಂದ್ರೆ ಸಾಹಿತ್ಯ ಇವೆಲ್ಲವೂ ಉಳಿಯುವುದು ಮತ್ತು ಬೆಳೆಸುವುದು ಕಷ್ಟವಾಗುತ್ತದೆ. ಹಾಗಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಒತ್ತು ನೀಡಬೇಕು ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೂ ಕೂಡ ಈ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮೊಬೈಲ್ ನೋಡುವುದರಿಂದ ಜ್ಞಾನ ಬೆಳೆಯುವುದಿಲ್ಲ. ಮನುಷ್ಯ ಮನುಷ್ಯನ ಸಂಬಂಧ ಹಾಳು ಮಾಡುತ್ತಿರುವುದು ಮೊಬೈಲ್. ಇದರಿಂದಾಗಿ ಮುಖಾಮುಖಿ ಮಾತನಾಡುವುದು ಕಡಿಮೆಯಾಗಿದೆ. ಮಿಸ್ಡ್ ಕಾಲ್ ಕೊಡುವುದು, ವಾಟ್ಸಾಪ್, ಪೇಸ್ ಬುಕ್ ಚಾಟ್ ಹೆಚ್ಚಾಗಿದೆ. ಇದು ಸಂಬಂಧವನ್ನು ಗೌಣ ಮಾಡುತ್ತಿದೆ ಎಂದು ವಿಷಾದಿಸಿದರು.
ಉದ್ಯೋಗಕ್ಕಾಗಿ ಭದ್ರಾವತಿಗೆ ಬಂದಿದ್ದನ್ನು ಮೆಲಕು ಹಾಕಿದ ಅವರು, ಒಂದು ನಾಟಕದಿಂದಾಗಿ ಇಡೀ ಜೀವನವೇ ಬದಲಾಗಿದೆ. ಜೋಕುಮಾರ ಸ್ವಾಮಿ, ರನ್ನನ ಗದಾಯುದ್ಧ, ಕುವೆಂಪು ರಕ್ತಾಕ್ಷಿ ಮೊದಲಾದ ನಾಟಕಗಳಲ್ಲಿ ನಟಿಸಿದ್ದರ ಪರಿಣಾಮವಾಗಿ ಕನ್ನಡ ಚಿತ್ರದಲ್ಲಿ ಹೆಚ್ಚಿನ ಅವಕಾಶ ಲಭ್ಯವಾಯಿತು. ಇಂದು ಇಡೀಕನ್ನಡ ನಾಡು ಗುರುತಿಸಲು ಕಾರಣವಾಗಿದ್ದು, ಈ ಜಿಲ್ಲೆ ಎಂದು ಸ್ಮರಿಸಿದರು.
ಕಲಾವಿದರಿಗೆ ಯಾವುದೇ ಪಾತ್ರ ಕೊಟ್ಟರೂ ಮಾಡುವಂತಿರಬೇಕು. ನಟನೆ ಮಾಡುವಾಗ ಪರಕಾಯ ಪ್ರವೇಶ ಇದ್ದರೆ ಮಾತ್ರ ಪಾತ್ರಕ್ಕೆ ಜೀವ ಬರುತ್ತದೆ. ಇಂದು ಸತ್ಯ ಘಟನೆಯ ಕತೆಯ ಚಿತ್ರಗಳು ಯಶಸ್ವಿಯಾಗುತ್ತಿವೆ. ಹಾಗೂ ಚಿತ್ರಗಳಲ್ಲಿ ಪೋಷಕರ ಪಾತ್ರ ಇಂದು ಕಡಿಮೆಯಾಗುತ್ತಿದೆ. ಪೋಷಕ ಪಾತ್ರಗಳು ಹೆಚ್ಚಾಗಿದ್ದರೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶಗಳು ತಲುಪುತ್ತವೆ ಎಂದರು.
ಪತ್ರಕರ್ತರಿಗೆ ನ್ಯಾಯಾದೀಶರ ಸಲಹೆ:
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ನ್ಯಾಯವಾದಿ ರೇವಣ ಸಿದ್ಧಯ್ಯ ಮಾತನಾಡಿ, ಯಾವುದೇ ಸುದ್ದಿ ಪ್ರಕಟ ಮಾಡಬೇಕಾದರೂ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಸುದ್ದಿ ಪ್ರಕಟಿಸುವುದರಿಂದ ಸಮಾಜಕ್ಕೆ ಸಹಾಯವಾಗುತ್ತದೆಯೇ ಎಂಬುದನ್ನು ಗಮನಿಸಬೇಕಿದೆ. ಸುದ್ದಿಯಿಂದ ಯಾರಿಗೂ ಮಾನಹಾನಿಯಾಗಿರಬಾರದು. ಆಗ ಮಾತ್ರ ಸುದ್ದಿಯಿಂದ ಹೆಚ್ಚಿನ ಪರಿಣಾಮ ಆಗಲಿದೆ ಎಂದರು.
ಡೆಫಾರ್ಮೇಶನ್ ಮತ್ತು ನ್ಯಾಯಾಂಗ ನಿಂದನೆಯಾಗುವಂತಹ ಸುದ್ದಿಗಳನ್ನು ಪರಿಶೀಲಿಸಬೇಕು. ಯಾವುದೇ ದೃಷ್ಟಿಕೋನದಲ್ಲಿ ಸುದ್ಧಿ
ಪ್ರಕಟಿಸಿದರೂ ಕೂಡ ಕೆಲವೊಮ್ಮೆ ಕಾನೂನು ತೊಡಕು ಎದುರಿಸಬೇಕಾಗುತ್ತದೆ ಎಂದ ಅವರು, ಪತ್ರಕರ್ತರಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಗ್ರಂಥಾಲಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕಿದೆ ಎಂದರು.
ಪತ್ರಕರ್ತರಿಗೆ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಗಾಗ ಕಾರ್ಯಾಗಾರ ಹಾಗೂ ಸಂವಾದವನ್ನು ಏರ್ಪಡಿಸಿದರೆ ಹೆಚ್ಚು ಸೂಕ್ತ ಎಂದ ಅವರು, ಪತ್ರಿಕಾ ಭವನದಲ್ಲಿ ಗ್ರಂಥಾಲಯ ಸ್ಥಾಪನೆಗೆ 25 ಸಾವಿರ ರೂ. ನಗದು ಅಥವಾ ಅಷ್ಟೇ ಬೆಲೆಯ ಪುಸ್ತಕಗಳನ್ನು ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ್ ನೇರಿಗೆ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post