ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವ ಸಮೂಹ ಭ್ರಾತೃತ್ವದಿಂದ ಸಮಾಜವನ್ನು ಮುನ್ನಡೆಸಬೇಕೆ ವಿನಃ ಐಕ್ಯತೆಯನ್ನು ಮುರಿದು ಮುನ್ನಡೆಸುವುದಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಿವಿಮಾತು ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಚಂದನ ಸಭಾಂಗಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಶಾಂತಿಯ ಸಂದೇಶ : ಸೌಹಾರ್ದ ಸಪ್ತಾಹ ಮತ್ತು ಶಾಂತಿಯ ನಡಿಗೆ ಸೌಹಾರ್ದತೆ ಕಡೆಗೆ ಜಾಥಾ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಹಿಂಸೆ ಜಗತ್ತನ್ನು ಆವರಿಸಿದೆ. ಜೊತೆಗೆ ಭಯೋತ್ಪಾದನೆ, ಕೋಮುವಾದ, ಅನಾಚಾರಗಳಿಂದ ವ್ಯಾಪಕ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಹಿಂಸೆಯಿಂದ ಹಿಂಸೆ ಹುಟ್ಟುತ್ತಿದೆ. ಸಮಾಜಕ್ಕೆ ಮೌಲ್ಯವು ಹೃದಯವಿದ್ದ ಹಾಗೆ. ಮೌಲ್ಯವಿಲ್ಲದಿದ್ದರೆ ಸಮಾಜಕ್ಕೆ ಹೃದಯವೇ ಇಲ್ಲದಂತಾಗುತ್ತದೆ. ಮೌಲ್ಯಾಧಾರಿತ ಜೀವನ ನೆಮ್ಮದಿಯ ಜೀವನ ನೀಡುತ್ತದೆ ಎಂದರು.
ದೇಶದ ಜನರನ್ನು ಹಸಿವು, ಬಡತನದಿಂದ ವಿಮೋಚನೆ ಮಾಡಬೇಕು ಎಂಬುದು ಗಾಂಧೀಜಿಯವರ ಆಸೆಯಾಗಿತ್ತು. ಅದರೆ ಇಂದಿಗೂ ನಮ್ಮ ನಡುವೆ ಅನಕ್ಷರಸ್ಥರು, ಹಸಿವು, ಬಡತನದಿಂದ ಬಳಲುತ್ತಿದ್ದಾರೆ ಎಂಬುದು ಬೇಸರದ ಸಂಗತಿ. ಶೇ.80% ಸಂಪತ್ತು 20% ಶ್ರೀಮಂತರ ಕೈಯಲ್ಲಿದೆ. ಅಸಮಾನತೆಯ ಭಾರತ ಕಟ್ಟುತ್ತಿದ್ದೇವೆ ಎಂದರು.
ಗಾಂಧೀಜಿಯವರ ಕನಸನ್ನು ಪೂರ್ಣಗೊಳಿಸುವ ಕಾರ್ಯ ಯುವ ಸಮೂಹ ಮಾಡಬೇಕಿದೆ. ಹಸಿವು, ಬಡತನ ಮುಕ್ತ ಸಮಾಜ ನಿರ್ಮಾಣಕ್ಕೆ ಕಂಕಣಬದ್ದರಾಗಿ. ಗಾಂಧೀಜಿಯವರು ರೈತರು, ಮಹಿಳೆಯರು, ಎಲ್ಲಾ ಭಾಷೆ, ಜಾತಿಯ ಜನರನ್ನು, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಘಟಿಸುತ್ತಿದ್ದರು. ಅದರೇ ಇಂದು ಐಕ್ಯತೆಯನ್ನು ಹೊಡೆದು ಬಿಸಾಕಿದ್ದೇವೆ. ವಿಷವನ್ನು ಬಿತ್ತುವ ಕಾರ್ಯ ನಮ್ಮ ನಡುವೆ ಆಗುತ್ತಿದೆ. ಆಷಾಢಭೂತಿಗಳ ಸಂಖ್ಯೆ ಸಮಾಜದಲ್ಲಿ ಜಾಸ್ತಿಯಾಗುತ್ತಿದೆ. ಅಂತಹ ಅಶಾಷಡಭೂತಿತನ ಯುವ ಸಮೂಹಕ್ಕೆ ಪ್ರೇರಣೆಯಾಗದಿರಲಿ. ಯಾರೆ ಒಪ್ಪಿಕೊಳ್ಳಲಿ ಬಿಡಲಿ, ಗಾಂಧೀಜಿ ಎಂದೆಂದಿಗೂ ಪ್ರಸ್ತುತ. ಮೌಲ್ಯಾಧಾರಿತ ಜೀವನ ಮತ್ತು ಸಮಾಜ ಕಟ್ಟಲು ಗಾಂಧೀಜಿ ಎಂದೆಂದಿಗೂ ಪ್ರೇರಣೀಯ ಎಂದು ಹೇಳಿದರು.
ನಾವೀನ್ಯಯುತ ಯೋಜನೆಗೆ ಜಾತಿ ಗಣತಿ ಅತ್ಯವಶ್ಯಕ
ಸಮೀಕ್ಷೆಯಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಡ್ಡಾಯವಲ್ಲ. ಈ ಸಮೀಕ್ಷೆಯಲ್ಲಿ ಸೇರಿಲ್ಲ ಎನ್ನುವ ಕಾರಣಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಂದ ವಂಚಿತರಾಗುವುದಿಲ್ಲ. ಗಣತಿಯಲ್ಲಿ ಸೇರಿದ್ದಿರಿ ಎಂಬ ಮಾತ್ರಕ್ಕೆ ಹೆಚ್ಚು ಸೌಲಭ್ಯ ನೀಡುತ್ತಾರೆ ಎಂಬ ಭ್ರಮೆಯು ಬೇಕಿಲ್ಲ ಎಂದರು.
ಚಾಣಾಕ್ಯ ಕಾಲದಲ್ಲಿಯೂ ಗಣತಿ ಕಾರ್ಯ ನಡೆದಿದೆ. ಪ್ರತಿಯೊಂದು ರಾಜ ಮಹಾರಾಜರ ಕಾಲದಲ್ಲಿ ತಮ್ಮದೇ ರೀತಿಯಲ್ಲಿ ಗಣತಿ ಕಾರ್ಯ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಕಾರ್ಯಯೋಜನೆಗಳು ರೂಪಗೊಳ್ಳುತ್ತಿದ್ದವು. ಹಾಗಾಗಿ ಜಾತಿ ಗಣತಿ ಎಂಬುದು ಅವಶ್ಯಕವಾಗಿದೆ ಎಂದರು.
ಒಳಮೀಸಲಾತಿ ಕುರಿತು ಆಯೋಗ ಕಾರ್ಯನಿರ್ವಹಿಸುವಾಗ, ಶೇ.80 ಪರಿಶಿಷ್ಟ ಜಾತಿಯ ಮಕ್ಕಳು ಸುಶಿಕ್ಷಿತರಾಗಿದ್ದಾರೆ ಎಂದು ತಿಳಿಯಿತು. ಇದರಲ್ಲಿ ಶೇ.7 ಮಾತ್ರ ಪದವಿ ಹಂತ ಪೂರೈಸಿದ್ದರು ಎಂಬುದು ಗಮನಾರ್ಹ. ಅಂದರೆ ಶೇ.73ರಷ್ಟು ಮಕ್ಕಳು ಶಾಲಾ ಹಂತಕ್ಕೆ ತಮ್ಮ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಇದಕ್ಕೆ, ಶಾಲಾ ಹಂತದಲ್ಲಿ ಸರ್ಕಾರ ನೀಡುವ ಉಚಿತ ಆಹಾರ ಮತ್ತು ಬಟ್ಟೆ ಕಾರಣವಿರಬಹುದು. ಇಂತಹ ಸತ್ಯ ಸಮಾಜ ಅರಿಯಬೇಕಾದರೆ ಜಾತಿ ಗಣತಿ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಎಲ್ಲಾ ಜನರು ಒಂದಲ್ಲ ಒಂದು ರೀತಿಯಲ್ಲಿ ಮೀಸಲಾತಿ ಅನುಭವಿಸುತ್ತಿದ್ದಾರೆ. ಅದರೇ 62 ಲಕ್ಷ ಹುದ್ದೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಉಳಿದಿವೆ. ಅನುದಾನಿತ ಸಂಸ್ಥೆಗಳಲ್ಲಿ ಒಂದೇ ಒಂದು ನೇಮಕಾತಿಗೆ ಅವಕಾಶ ಸಿಗುತ್ತಿಲ್ಲ. ಇದರಿಂದ ಮೀಸಲಾತಿಗಳು ರಚನೆಗೊಂಡರು ಸರಿಯಾದ ಬಳಕೆ ಮಾಡಿಕೊಳ್ಳುವ ಅವಕಾಶವೇ ಸಿಗುತ್ತಿಲ್ಲ. ಜೊತೆಯಲ್ಲಿ ಆಟೋಮೇಷನ್ ಕಾಲದಲ್ಲಿ ಮಾನವ ಸಂಪನ್ಮೂಲ ಬಳಕೆಯನ್ನು ಕಡಿತಗೊಳಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಎಲ್ಲಾ ಮೀಸಲಾತಿಯನ್ನು ತನ್ನಡೆಗೆ ಸೆಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಗಾಂಧೀಜಿ ಎಂದಾಗ ಒಂದು ರೀತಿಯ ಅಸಮಾಧಾನ, ಅಸಹಿಷ್ಣತೆಯನ್ನು ಯುವ ಸಮೂಹದಲ್ಲಿ ಕಾಣುತ್ತಿದ್ದೇವೆ. ಅದರೇ ಗಾಂಧೀಜಿಯ ಉದಾತ್ತ ಸ್ವಭಾವವನ್ನು ಅರ್ಥ ಮಾಡಿಕೊಳ್ಳದೆ ಇಂತಹ ಅಸಹಿಷ್ಣತೆ ಸರಿಯಲ್ಲ. ಗಾಂಧೀಜಿಯವರು ಪ್ರಶ್ನೆಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಎದುರಿಸಿದವರು.
ಗಾಂಧೀಜಿಯನ್ನು ಪ್ರಶ್ನೆ ಮಾಡುವಾಗ ಅಸಹಿಷ್ಣತೆ ಇರಬಾರದು. ಇದರಿಂದ ನಮ್ಮ ವ್ಯಕ್ತಿತ್ವದಲ್ಲಿ ದೋಷಗಳು ರೂಪಗೊಳ್ಳುತ್ತದೆಯೆ ವಿನಃ, ಗಾಂಧೀಜಿಗೆ ಯಾವುದೆ ಲಾಭ ನಷ್ಟವಿಲ್ಲ. ಗಾಂಧೀಜಿಯವರನ್ನು ಸರಿಯಾದ ರೀತಿಯಲ್ಲಿ ಅರ್ಥೈಸುವ ಕೆಲಸ ಯುವ ಸಮೂಹದಿಂದ ಆಗಬೇಕಿದೆ ಎಂದರು.
ಯುದ್ದ ದೂರದಿಂದ ನೋಡುವವರಿಗೆ ಉನ್ಮಾನದ ಸಂಗತಿ. ಅದರೆ ಅದರಿಂದ ನೋವುಂಟಾದ ಜನ ಸಾಮಾನ್ಯರ ಪರಿಸ್ಥಿತಿಯನ್ನು ಅರ್ಥೈಸಿಕೊಂಡಾಗ, ಯುದ್ಧದ ಭೀಕರತೆ ಗೊತ್ತಾಗುತ್ತದೆ. ಗಾಂಧೀಜಿಯ ತತ್ವ ಅಂತಹ ಭೀಕರತೆಯನ್ನು ಅಳಿಸಿ ಹಾಕಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಮೌಲಾನಾ ಶಾಹುಲ್ ಹಮೀದ್, ಎಸ್.ಎಂ.ಎಸ್.ಎಸ್ ನಿರ್ದೇಶಕ ಫಾದರ್ ಪಿಯೂಸ್ ಡಿಸೋಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನ್ಯಾಯವಾದಿ ಕೆ.ಪಿ.ಶ್ರೀಪಾಲ್, ಐಕ್ಯೂಎಸಿ ಸಂಯೋಜಕ ಡಾ.ಎಸ್.ಕಾಂತರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post