ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಸಿ ಕಚೇರಿಯ ಮುಂಭಾಗದ ಆಟದ ಮೈದಾನ, ಗೋವಿಂದಾಪುರದ ಆಶ್ರಯ ಮನೆಗಳು, ವಿತರಣೆಯಾಗದ ಪಾಲಿಕೆಯಿಂದ ನಿರ್ಮಿಸಿದ ಮಳಿಗೆಗಳು ಈ ಮುಂತಾದ ಸಮಸ್ಯೆಗಳನ್ನು ಇಟ್ಟುಕೊಂಡು ರಾಷ್ಟ್ರಭಕ್ತ ಬಳಗ ಹೋರಾಡುತ್ತಾ ಬಂದಿದೆ. ಈ ಎಲ್ಲಾ ಸಮಸ್ಯೆಗಳನ್ನು ಮೇ.15ರೊಳಗೆ ಬಗೆಹರಿಸದಿದ್ದರೆ ಬೃಹತ್ ಹೋರಾಟವನ್ನ ಹಮ್ಮಿಕೊಳ್ಳುವುದಾಗಿ ರಾಷ್ಟ್ರಭಕ್ತರ ಬಳಗದ ಪ್ರಮುಖ ಹಾಗೂ ಮಾಜಿ ಜಿಪಂ ಸದಸ್ಯ ಕೆ.ಈ. ಕಾಂತೇಶ್ K E Kanthesh ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಭಕ್ತರ ಬಳಗವು ನಗರದ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಲೇ ಬಂದಿದೆ. ಪ್ರಮುಖವಾಗಿ ಡಿಸಿ ಕಚೇರಿ ಮುಂದೆ ಇರುವ ಆಟದ ಮೈದಾನದ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿ ಮೂರು-ನಾಲ್ಕು ತಿಂಗಳಾದರೂ ಕೂಡಾ ಇನ್ನೂ ವರದಿಯನ್ನೇ ನೀಡಿಲ್ಲ. ಅವರು ಕೂಡಲೇ ವರದಿ ನೀಡಬೇಕು ಎಂದರು.
ಗೋವಿಂದಾಪುರದ ಆಶ್ರಯ ಮನೆಗಳು ಇನ್ನೂ ವಿತರಣೆಯಾಗಿಲ್ಲ. ಅಲ್ಲಿ ಸುಮಾರು 12 ಕೋಟಿ ರೂ. ವೆಚ್ಚದ ಕೆಲಸವಿದೆ. ವಸತಿ ಸಚಿವರು ಇಲ್ಲಿಗೆ ಬಂದಿದ್ದಾಗ 12 ಕೋಟಿ ರೂ. ತಕ್ಷಣ ನೀಡುವುದಾಗಿ ಹೇಳಿದ್ದರು. ಪಾಲಿಕೆ ಆಯುಕ್ತರೂ ಕೂಡಾ ಸಚಿವರಿಗೆ ತಿಳಿಸಿ ಕೂಡಲೇ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಫಲಾನುಭವಿಗಳಿಗೆ ಮನೆಗಳನ್ನು ಹಂಚುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಮನೆಗಳ ವಿತರಣೆ ಆಗಿಲ್ಲ ಎಂದರು.
ಮಹಾನಗರ ಪಾಲಿಕೆಯಿಂದ ಈಗಾಗಲೇ ನಿರ್ಮಿಸಿರುವ ಶಿವಪ್ಪನಾಯಕ ವಾಣಿಜ್ಯ ಸಂಕೀರ್ಣ, ಗಾರ್ಡನ್ ಏರಿಯಾದ ಸಂಕೀರ್ಣ ಮತ್ತು ಗಾಂಧಿನಗರ ಸಂಕೀರ್ಣ ವಿತರಣೆಯಾಗದೆ ನೆನೆಗುದಿಗೆ ಬಿದ್ದಿದೆ. ಹರಾಜು ಪ್ರಕ್ರಿಯೆ ನಡೆಯದೆ ಕೋಟ್ಯಾಂತರ ರೂ. ಆದಾಯ ನಷ್ಟವಾಗಿದೆ. ಈ ಬಗ್ಗೆ ಹಲವು ಬಾರಿ ಪಾಲಿಕೆ ಗಮನಕ್ಕೆ ತಂದರೂ ಕೂಡಾ ಹರಾಜು ಪ್ರಕ್ರಿಯೆ ನಡೆದಿಲ್ಲ ಎಂದರು.
ರಾಷ್ಟ್ರಭಕ್ತರ ಬಳಗವು ಪ್ರತೀ ವಾರ್ಡ್‍ನಲ್ಲಿ 10 ಜನರ ಮಹಿಳೆಯರು ಇರುವಂತೆ ಮಹಿಳಾ ಘಟಕಗಳನ್ನು ಸ್ಥಾಪನೆ ಮಾಡಲಿದೆ. ಮೇ.5ರೊಳಗೆ ಈ ಕಾರ್ಯ ಮುಗಿಯಲಿದೆ. ಆನಂತರ ಮೇ.15ರೊಳಗೆ ಈ ಎಲ್ಲಾ ಸಮಸ್ಯೆಗಳನ್ನು ಈಡೇರಿಸುವಂತೆ ಗಡುವು ನೀಡಲಾಗಿದೆ. ಸಮಸ್ಯೆಗಳು ಬಗೆಹರಿಯದಿದ್ದರೆ ಮಹಿಳಾ ಘಟಕಗಳನ್ನೂ ಒಳಗೊಂಡಂತೆ ರಾಷ್ಟ್ರಭಕ್ತರ ಬಳಗವು ಪಾಲಿಕೆ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ತಾತ್ವಿಕ ಅಂತ್ಯ ಕಾಣುವವರೆಗೆ ಹೋರಾಟ ನಡೆಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಈ.ವಿಶ್ವಾಸ್, ಕಾಚಿನಕಟ್ಟೆ ಸತ್ಯನಾರಾಯಣ, ಕುಬೇರಪ್ಪ, ಬಾಲು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















