ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಸ್ಲಿಂರಿಗೆ ವಸತಿ ಯೋಜನೆಯಲ್ಲಿ ಶೇ.15ರಷ್ಟು ಮೀಸಲಾತಿಯ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಾಣ ಹೋದರೂ ಜಾರಿಯಾಗಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಗುಡುಗಿದರು.
ಅವರು ಇಂದು ರಾಷ್ಟ್ರಭಕ್ತ ಬಳಗವು ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ವಸತಿ ಯೋಜನೆಗಳಲ್ಲಿ ಅಸಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‍ನಿಂದ ಶಿವಪ್ಪನಾಯಕ ವೃತ್ತದವರೆಗೆ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಜಾರಿಗೆ ತಂದ ಶೇ.15ರಷ್ಟು ಮೀಸಲಾತಿಗೆ ಯಾವ ಬೆಲೆಯೂ ಇಲ್ಲ. ಇದು ಕೇವಲ ಮುಸ್ಲಿಂ ಓಲೈಕೆಯಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಸಹಿಸಂಗ್ರಹಿಸಿ ರಾಜ್ಯಪಾಲರಿಗೆ ಕೊಡುತ್ತೇವೆ. ಕಳೆದವರ್ಷ ಮುಸ್ಲಿಂರಿಗೆ 900 ಕೋಟಿ ರೂಪಾಯಿ ಅನುದಾನವನ್ನು ನೀಡಿ, ಈ ವರ್ಷ 1300 ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದೀರಿ. ಮುಸ್ಲಿಂರು ನಿಮಗೆ ಬೀಗರಾ…? ಎಂದು ಪ್ರಶ್ನಿಸಿದರು.
ಅಹಲ್ಯಾಬಾಯಿ ಹೋಳ್ಕರ್ ರಕ್ತವನ್ನು ಹಂಚಿಕೊಂಡಿರುವ ಸಿದ್ಧರಾಮಯ್ಯನವರೇ ನೀವು ಈಗ ಔರಂಗ್‍ಜೇಬನ ಕಡೆ ತಿರುಗಿದ್ದೀರಿ. ರಾಜ್ಯ, ರಾಷ್ಟ್ರದ ಬಗ್ಗೆ ಕಿಂಚಿತ್ತಾದರೂ ಆಲೋಚನೆ ಇದಿಯಾ ಎಂದು ಕುಟುಕಿದರು.
ನರೇಂದ್ರಮೋದಿಯವರು #Narendra Modi ವಿಶ್ವನಾಯಕರಾದರೆ ಮುಸ್ಲಿಂರ ಓಲೈಕೆ ಮಾಡಿ, ಸಿದ್ದರಾಮಯ್ಯ ಪಾಕಿಸ್ತಾನ ಟಿ.ವಿ.ಗಳಲ್ಲಿ ರಾರಾಜಿಸಿ ಆ ದೇಶದ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಮುಸ್ಲಿಂ ಓಲೈಕೆಯ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, #CM Siddaramaiah ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಈ ಮೂವರನ್ನು ಜೈಲಿಗೆ ಕಳುಹಿಸಬೇಕು. ಮಂಗಳೂರಿನಲ್ಲಿ ಕೇವಲ ಓರ್ವ ಮುಸ್ಲಿಂನ ಹತ್ಯೆಯಾಗಿದ್ದಕ್ಕೆ ಇಡೀ ಕಾಂಗ್ರೆಸ್ ಪಟಾಲಂ ಮಂಗಳೂರಿಗೆ ದೌಡಾಯಿಸಿತ್ತು. ಆದರೆ ರಾಜ್ಯದಲ್ಲಿ ಅದಕ್ಕೂ ಮೊದಲು 15 ಹಿಂದೂಗಳ ಕೊಲೆಯಾದಾಗ ಎಲ್ಲಿ ಹೋಗಿದ್ರೀ ಎಂದು ಕಿಡಿಕಾರಿದರು.
ಭಾರತ ಹಿಂದೂ ರಾಷ್ಟ್ರವಾಗಿರದೇ ಇರಬಹುದು. ಆದರೆ ಮುಸ್ಲಿಂ ರಾಷ್ಟ್ರವಲ್ಲ, ಮುಸ್ಲಿಂರ ಓಲೈಕೆಯನ್ನು ಹಿಂದೂ ಸಮಾಜ ಯಾವತ್ತೂ ಸಹಿಸುವುದಿಲ್ಲ. ಅಲ್ಲದೆ ಹಿಂದೂ ಸಮಾಜ ಎಂದೂ ಸುಮ್ಮನೇ ಕೂತಿಲ್ಲ ಎಂದರು.
ಸಿದ್ದರಾಮಯ್ಯನವರೇ ಇದೇ ರೀತಿ ಮುಸ್ಲಿಂ ಓಲೈಕೆ ಮುಂದುವರಿಸಿದರೆ ನಿಮ್ಮ ಪತ್ನಿಯೂ ಬುರುಕಾ ಧರಿಸುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂ ವಿರೋಧಿ, ಧರ್ಮ ವಿರೋಧಿ ಹಾಗೂ ಜಿಹಾದಿ ಸರ್ಕಾರವಾಗಿದೆ. ಹಿಂದೂಗಳಿಗೆ ಮಂಜೂರಾಗಿರುವ ನಿವೇಶನಗಳನ್ನು ಮುಸಿಂರಿಗೆ ನೀಡುವ ಮೂಲಕ ಹಿಂದೂ ವಿರೋಧಿತನವನ್ನು ಪ್ರದರ್ಶಿಸಿದ್ದೀರಿ. ಶಿವಮೊಗ್ಗದಲ್ಲಿಯೂ ಕೆ.ಎಸ್. ಈಶ್ವರಪ್ಪನವರು 5 ಸಾವಿರ ಮನೆಗಳನ್ನು ಹಂಚಿದರೂ ಯಾವುದೇ ಧರ್ಮವನ್ನು ಕೇಳಲಿಲ್ಲ. ನಾನು ಹಿಂದೂ ಎಂದರೆ ಸರ್ಕಾರ ಏನನ್ನೂ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆ.ಸಿ. ನಟರಾಜ್ ಭಾಗವತ್ ಮಾತನಾಡಿ, ಸರ್ಕಾರ ಮುಸ್ಲಿಂ ಓಲೈಕೆಯಲ್ಲಿ ತೊಡಗಿಕೊಂಡಿದೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಮುಸ್ಲಿಂ ಸರ್ಕಾರ. ಮುಸ್ಲಿಂರಲ್ಲಿ ಪ್ರತಿಭೆ ಇದ್ದವರು ಕೆಲಸ ಮಾಡಲಿ ಶಿವಮೊಗ್ಗದಲ್ಲಿ ಕಳೆದ 10-15 ವರ್ಷಗಳಿಂದ ಮುಸ್ಲಿಂ ಗುತ್ತಿಗೆದಾರರೋರ್ವರಿಗೆ ದೊಡ್ಡ ದೊಡ್ಡ ಗುತ್ತಿಗೆಯೇ ಸಿಗುತ್ತಿದ್ದು ಅವರು ಉತ್ತಮವಾಗಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಅವರ ಬಗ್ಗೆ ನಾವು ಏನೂ ವಿರೋಧಿಸುವುದಿಲ್ಲ. ಆದರೆ ಮೀಸಲಾತಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಕೆ.ಈ. ಕಾಂತೇಶ್, ಪ್ರಮುಖರಾದ ಶೇಷಾಚಲ, ರಮೇಶ್ ಬಾಬು, ಸುವರ್ಣಾ ಶಂಕರ್, ಮೋಹನ್ ಜಾದವ್, ಮಹಾಲಿಂಗಯ್ಯ ಶಾಸ್ತ್ರಿ, ವಾಸುದೇವ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















