ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರವು ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ #Census ವಿಪ್ರ ಬಾಂಧವರು ಧರ್ಮದ ಕಾಲಂ 1ರಲ್ಲಿ ಹಿಂದೂ ಎಂದೂ ಜಾತಿ ಕಾಲಂ 218ರಲ್ಲಿ ಹಿಂದೂ ಬ್ರಾಹ್ಮಣ ಎಂತಲೂ ಉಪ ಜಾತಿ ಕಾಲಂನಲ್ಲಿ ಏನೂ ಬರೆಯುವ ಅವಶ್ಯಕತೆ ಇಲ್ಲ ಎಂದು ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ರಾವ್ ತಿಳಿಸಿದರು.
ಅವರು ಇಂದು ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ರೊಡನೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಸಮೀಕ್ಷೆಯಲ್ಲಿ ಸೂಚಿಸಿದ ಎಲ್ಲ 60 ಕಾಲಂ ಗಳನ್ನು ತಾಳ್ಮೆಯಿಂದ, ಸರಿಯಾಗಿ ನೋಡಿಕೊಂಡು ಭರ್ತಿ ಮಾಡಬೇಕು. ಮಾತೃ ಭಾಷೆ ಕಾಲಂನಲ್ಲಿ ಕನ್ನಡ ಎಂದೂ, ಇತರ ಭಾಷೆ ಕಾಲಂನಲ್ಲಿ ಸಂಸ್ಕøತ ಎಂದೂ ನಮೂದಿಸಬೇಕು ಎಂದು ಹೇಳಿದರು.
ವಾಸ್ತವವಾಗಿ ರಾಜ್ಯದಲ್ಲಿ ಸುಮಾರು 65 ಲಕ್ಷ ಬ್ರಾಹ್ಮಣರು ಇದ್ದಾರೆ. ಆದರೆ ಕಳೆದ ಸಮೀಕ್ಷೆಯಲ್ಲಿ ಕೇವಲ 14 ಲಕ್ಷ ಬ್ರಾಹ್ಮಣರು ಇದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಹೀಗಾಗಬಾರದು. ಗಣತಿ ಸಮೀಕ್ಷೆಗೆ ಬಂದಾಗ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿಯನ್ನು ಸಿದ್ಧಪಡಿಸಿಕೊಂಡಿರಬೇಕು. ಸಮೀಕ್ಷೆಗೆ ಬಂದ ಅಧಿಕಾರಿಗಳೊಡನೆ ಸಂಯಮವಾಗಿ ವರ್ತಿಸಿ, ಅವರು ತುಂಬಿದ ಫಾರಂ ಅನ್ನು ಪರಿಶೀಲಿಸಿ ಸಹಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ಮಾತನಾಡಿ, ರಾಜ್ಯ ಸರ್ಕಾರ ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಾಮಾಣಿಕವಾಗಿ ಆಗಬೇಕು ಎಂಬುದು ಸರ್ಕಾರದ ಅಪೇಕ್ಷೆಯಾಗಿದೆ. ಇದು ಜಾತಿ ಸಮೀಕ್ಷೆ ಅಲ್ಲ. ಬ್ರಾಹ್ಮಣರು ಜವಾಬ್ದಾರಿಯಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೇಶವಮೂರ್ತಿ ಎಚ್.ಕೆ. ಮಾತನಾಡಿ, ತ್ರಿಮತಸ್ಥ ಬ್ರಾಹ್ಮಣರಲ್ಲೇ 35-40 ಉಪ ಪಂಗಡಗಳಿವೆ. ಬ್ರಾಹ್ಮಣರು ಬುದ್ದಿವಂತರು ಎಂದು ಪ್ರಸಿದ್ಧರಾಗಿದ್ದಾರೆ. ಆದರೆ ಹಿಂದಿನ ಸಮೀಕ್ಷೆಯಲ್ಲಿ ಬ್ರಾಹ್ಮಣರು ಸರಿಯಾದ ಮಾಹಿತಿಯನ್ನು ನೀಡದೇ ಇದ್ದ ಕಾರಣ ಬ್ರಾಹ್ಮಣರು ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈಗ ಎಚ್ಚರಿಕೆಯಿಂದ ಮಾಹಿತಿ ನೀಡುವ ಜವಾಬ್ದಾರಿಯೂ ಬ್ರಾಹ್ಮಣರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಅಚ್ಯುತ ರಾವ್, ಚಂದ್ರಶೇಖರ್, ವನಜಾ ರವಿಕುಮಾರ್, ನಾಗೇಶ್, ಯಜ್ಞನಾರಾಯಣ, ಶ್ರೀನಿವಾಸ್, ವಿಶ್ವನಾಥ್ ಕೆ.ಎನ್., ಸಂತೋಷ ಕುಮಾರ್, ಸವಿತಾ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















