ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಭಾರತಿ ಕಾಲೋನಿಯಿಂದ ಸೀಗೆಹಟ್ಟಿಗೆ ಹೋಗುವ ರಾಜಕಾಲುವೆ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಅದನ್ನು ಸಂಪೂರ್ಣಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ರಾಜಕಾಲುವೆ ಸಂಪೂರ್ಣವಾಗಿ ಕಸ ಹಾಗೂ ಮಣ್ಣಿನಿಂದ ತುಂಬಿದ್ದು, ಸಣ್ಣ ಮಳೆ ಬಂದರೂ ಅಲ್ಲಿನ ಎಲ್ಲಾ ಮನೆಗಳಿಗೂ ನೀರು ನುಗ್ಗುತ್ತಿದ್ದುಈ ಬಗ್ಗೆ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆಯ ಸದಸ್ಯರು, ಉಪಮೇಯರ್ ಗನ್ನಿಶಂಕರ್ ಹಾಗೂ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದ ನಂತರ ಸ್ವಚ್ಛತಾಕಾರ್ಯವನ್ನು ಪ್ರಾರಂಭಿಸಲಾಗಿತ್ತು. ಆದರೆ ಸಂಪೂರ್ಣ ಸ್ವಚ್ಛತಾ ಕಾರ್ಯ ಮುಗಿಯುವ ಮುನ್ನವೇ ಕಾಲುವೆ ಮುಚ್ಚಲು ಕೆಲಸಗಾರರನ್ನು ಕಳಿಸಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪಮೇಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರೆ ಕೆಲಸ ಮುಗಿದಿದೆ ಎಂದು ನೆಪ ಹೇಳುತ್ತಿದ್ದಾರೆ. ಸಂಪೂರ್ಣ ಸ್ವಚ್ಚತೆ ಆಗಿಲ್ಲ ಎಂದು ತೋರಿಸಿದರೂ ಗಮನ ಹರಿಸುತ್ತಿಲ್ಲ. ಸಂಪೂರ್ಣ ಸ್ವಚ್ಚತೆ ಆಗದೆ ಮುಚ್ಚಿದರೆ ಕಾಮಗಾರಿಯ ಪ್ರಯೋಜನವೇ ಆಗುವುದಿಲ್ಲ ಮತ್ತು ಜನರು ಪರದಾಡುವ ಪರಿಸ್ಥಿತಿ ಬರುತ್ತದೆ. ಸಣ್ಣ ಮಳೆಗೂ ಮನೆಗಳಿಗೆ ನೀರು ನುಗ್ಗಿ ಪರದಾಡುವಂತಾಗುತ್ತದೆ ಎಂದು ತಮ್ಮ ಅಳಲು ತೊಂಡಿಕೊಂಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಂಪೂರ್ಣ ಸ್ವಚ್ಛತೆ ಮಾಡಿಕೊಡಬೇಕು ಎಂದು ಭಾರತಿ ಕಾಲೋನಿ ನಿವಾಸಿಗಳು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















