ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು. ಹೊಸ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು. ನಿವೃತ್ತರಾದ ನೌಕರರಿಗೆ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ #KSRTC ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಡಿ. 31ರಿಂದ ಸಾರಿಗೆ ನೌಕರರ ಅನಿರ್ದಿಷ್ಟವಾಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಉಪಾಧ್ಯಕ್ಷ ಎಂ. ಮಹದೇವ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ವೇತನ ಹೆಚ್ಚಳ 38 ತಿಂಗಳ ಬಾಕಿ ಉಳಿಯಲು ಸರ್ಕಾರ ಹಾಗೂ ಆಡಳಿತ ವರ್ಗದ ವಿಳಂಬ ಧೋರಣೆ ಕಾರಣವಾಗಿದ್ದು, ಸರ್ಕಾರದ ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ಲಾಭ ದೊರೆತಿದೆ. ಹಲವು ಹತ್ತು ಸಮಸ್ಯೆಗಳನ್ನು ಅನುಭವಿಸಿ ಸಾರಿಗೆ ಕಾರ್ಮಿಕರು ಈ ಯೋಜನೆಯನ್ನು ಯಶಸ್ವಿಗೊಳಿಸಿ ಹೈರಾಣಾಗಿದ್ದಾರೆ. ಆದ್ದರಿಂದ 38 ತಿಂಗಳ ಬಾಕಿ ಹಣ, 2024ರ ಜನವರಿ 1ರಿಂದ ಹೊಸ ವೇತನ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕಾಗಿರುವುದು ಸರ್ಕಾರದ ಹಾಗೂ ಆಡಳಿತ ವರ್ಗದ ಜವಾಬ್ದಾರಿಯಾಗಿದೆ ಎಂದರು.
ಸಮಿತಿಯಿಂದ ಡಿ. 9ರಂದು ಬೆಳಗಾವಿ ಚಲೋ ನಡೆಸಿ ಮುಖ್ಯಮಂತ್ರಿಯವರಿಗೆ ಡಿ. 31ರಿಂದ 4 ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ನೋಟಿಸ್ ನೀಡಲಾಯಿತು. ಈ ಬೆಳಗಾವಿ ಚಲೋ ಕಾರ್ಯಕ್ರಮವನ್ನು ನೌಕರರು ಯಶಸ್ವಿಗೊಳಿಸಿದ್ದಾರೆ. ನಮ್ಮ ಮುಷ್ಕರದ ನೋಟಿಸ್ ಅನ್ನು ಸರ್ಕಾರದ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವೀಕರಿಸಿ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು ಎಂದರು.
Also read: ವೈವಾಹಿಕ ಸಂಬಂಧಗಳ ಜಟಿಲತೆಯಿಂದ ಕೃಷಿ ತಲ್ಲೀನತೆ ಕುಂಠಿತ | ರೈತ ಸಮೂಹ ಆತಂಕ
ಭರವಸೆಯಂತೆ ಸರ್ಕಾರವು ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯ ಮನೋಭಾವ ಬಿಟ್ಟು ಕೂಡಲೇ ಸಂಘಟನೆಗಳೊಂದಿಗೆ ಚರ್ಚಿಸಿ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದಲ್ಲಿ ಡಿ. 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ. ಸಾರಿಗೆ ನೌಕರರ ಪಾಲಿಗೆ ಇದು ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಈ ಹೋರಾಟದಲ್ಲಿ ಜಯ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.
ಡಿ. 31ರ ಮಧ್ಯರಾತ್ರಿಯಿಂದ ಹಮ್ಮಿಕೊಂಡಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ರಾಜ್ಯಾದ್ಯಂತ ಬಸ್ ಗಳನ್ನು ರಸ್ತೆಗಿಳಿಸುವುದಿಲ್ಲ. ಇದರಿಂದ ಆಗುವ ತೊಂದರೆಗೆ ಸಾರ್ವಜನಿಕರು ಹಾಗೂ ಮಹಿಳೆಯರು ಸಹಕರಿಸುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ರಾಜು ಚಿನ್ನಸ್ವಾಮಿ, ಲೋಕನಾಥ್, ಕರಿಬಸಪ್ಪ, ಯೋಗೀಂದ್ರ, ಮಂಜಪ್ಪ, ಧರ್ಮಪ್ಪ, ಪೀರ್ ಸಾಬ್, ಗುರುರಾಜ್, ವಿಜಯಕುಮಾರ್, ವೀರೇಶ್ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post