ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ತಮ್ಮ ಆಲೋಚನೆಗಳಿಗೆ ಆವಿಷ್ಕಾರದ ಸ್ಪರ್ಶ ನೀಡಿ ಯೋಜನೆಗಳನ್ನು ರೂಪಿಸಬೇಕಾಗಿದ್ದು, ಅದರಿಂದ ಪರಿಣಾಮಕಾರಿ ಅನುಷ್ಟಾನಗೊಳಿಸಲು ಸಾಧ್ಯವಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂದು ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸ್ಥಾಪಿಸಿರುವ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿಏರ್ಪಡಿಸಿದ್ದ ಕಮ್ಯುನಿಟಿ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ನಾವೀನ್ಯ ಯೋಜನೆಗಳ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕುತೂಹಲವೇ ವೈಜ್ಞಾನಿಕ ಆವಿಷ್ಕಾರಗಳ ಪ್ರಮುಖ ತಳಹದಿಯಾಗಿದ್ದು, ಅಂತಹ ಕುತೂಹಲಕಾರಿ ಚಿಂತನೆ ನಿಮ್ಮದಾಗಲಿ . ಶಿಕ್ಷಣದ ಯಾವುದೇ ಚಟುವಟಿಕೆಗಳ ಮೂಲ ಉದ್ದೇಶ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು. ಈ ಹಿನ್ನಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್, ನಾವೀನ್ಯ ಚಿಂತನೆಗಳ ಅನುಸಾರ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಿದೆ. ಭಾರತ ಸರ್ಕಾರ ನೀಡಿರುವ ಸುಮಾರು ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಟಿಂಕರಿಂಗ್ ಲ್ಯಾಬ್ ಸ್ಥಾಪಿಸಲಾಗಿದ್ದು, ಆವಿಷ್ಕಾರಿ ಉಪಕರಣಗಳನ್ನು ಇಡಲಾಗಿದೆ. ತರಗತಿಗಳ ಲ್ಯಾಬ್ ಹೊರತಾಗಿ ನಮ್ಮಲ್ಲಿರುವ ಯೋಚನೆಗಳನ್ನು ಅನುಭಾವಾಧಾರಿತವಾಗಿ ರೂಪಿಸಲು ಪೂರಕ ವೇದಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನವೀನ ಪಾಯಸ್, ಅಟಲ್ ಟಿಂಕರಿಂಗ್ ಲ್ಯಾಬ್ ಸಂಯೋಜಕರಾದ ಧರಣೇಶ್, ಕಿಡ್ವೆಂಟೊ ಕಂಪನಿಯ ಸಂಪನ್ಮೂಲ ವ್ಯಕ್ತಿಗಳಾದ ನಿಖಿಲ್ ಭಾಸ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















