ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಶಸ್ವಿ ಉದ್ಯಮಿಗೆ ಆವಿಷ್ಕಾರಿ ಚಿಂತನೆಗಳು, ಸಂಪನ್ಮೂಲಗಳ ಕ್ರೋಢೀಕರಣ ಮತ್ತು ನಿರ್ವಹಣಾ ಕೌಶಲ್ಯತೆಗಳು ಅತ್ಯವಶ್ಯಕ ವಿಚಾರವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಗೋಪಿನಾಥ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ #JNNCE College of Engineering ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆ.ಸಿ.ಟಿ.ಯು ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಂ.ಎಸ್.ಎಂ.ಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಯೋಜನೆಯಡಿ ಇನ್‌ಕ್ಯುಬೇಷನ್ ಯೋಜನೆ ಕುರಿತು ಒಂದು ದಿನದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಣ್ಣ ಪ್ರಯತ್ನಗಳು ಇಂದು ಅತಿ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿರುವ ಅನೇಕ ಅದ್ಭುತ ಉದಾಹರಣೆಗಳಿವೆ. ಅಂತಹ ಯಶಸ್ಸಿನ ಹಾದಿಗಳಿಂದ ಪ್ರೇರಣೆ ಪಡೆಯಿರಿ. ಅವಕಾಶಗಳನ್ನು ಸಂಶೋಧಿಸಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಊರಿನಲ್ಲಿ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಿದರೆ ಸಾಕು ಎಂಬ ಸಂಕುಚಿತತೆ ಬೇಡ.
ನಾವು ರೂಪಿಸುವ ಯೋಜನೆಗಳಿಗೆ ನಾವೀನ್ಯತೆಯ ಸ್ಪರ್ಶ ನೀಡಿ. ಕಷ್ಟ ಸುಖಗಳನ್ನು ಸಮಾನವಾಗಿ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಿ. ಹೊಸತನವನ್ನು ಪ್ರಯತ್ನಿಸುವ, ವೈಫಲ್ಯಗಳನ್ನು ಎದುರಿಸುವ, ನಿರಂತರವಾಗಿ ಕಲಿಯುವ ಧೃತಿ ಯುವ ಸಮೂಹದಾಗಲಿ ಎಂದು ಹೇಳಿದರು.

ಮೊಬೈಲ್ ಎಂಬ ಅಂಧತ್ವದಲ್ಲಿ ಮುಳುಗಿ, ಅದೆಷ್ಟೋ ಯುವ ಮನಸ್ಸು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಬೆಳಗ್ಗೆ ಬೇಗ ಏಳಲಾಗದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ.
ಬದುಕಿನ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಾಗ ಸಮಯದ ನಿರ್ವಹಣೆ ಎಂಬುದು ಅತಿ ಮುಖ್ಯ. ಕೈಗಾರಿಕೆಗಳಲ್ಲಿರುವ ಸಿಬ್ಬಂದಿಗೆ ಒಡೆತನದ ಅವಕಾಶ ಕೊಡಬೇಕು. ಇದರಿಂದ ಸಿಬ್ಬಂದಿಯಲ್ಲಿ ಹೆಚ್ಚು ಸಕ್ರಿಯವಾಗುವಂತಹ ತೊಡಗಿಸಿಕೊಳ್ಳುವ ಮನಸ್ಥಿತಿ ನಿರ್ಮಾಣವಾಗಲಿದೆ. ಪದವಿ ಮುಗಿಸಿ ಹೊರಬಂದಾಗ, ಇಷ್ಟ ಪಟ್ಟು ಕೆಲಸಕ್ಕೆ ಸೇರಿ, ಕಷ್ಟಪಟ್ಟು ದುಡಿಯಿರಿ. ಹೊಸತನವನ್ನು ಕಲಿಯಲು ಪ್ರಯತ್ನಿಸಿ. ಸಂಬಳದ ಬಗ್ಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಡಿ. ಅನುಭವ ಬೆಳೆದಂತೆಲ್ಲ ಖ್ಯಾತಿ ಮತ್ತು ಹಣ ತಾನಾಗಿಯೇ ದೊರಕಲಿದೆ ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಹನುಮಂತಪ್ಪ ಪಿ., ಎಂಸಿಎ ವಿಭಾಗದ ಮುಖ್ಯಸ್ಥ ಡಾ.ಹೇಮಂತ್ ಕುಮಾರ್, ಸಹಾಯಕ ಪ್ರಾಧ್ಯಾಪಕ ಕೆ.ಎಲ್.ಅರುಣ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗೇಶ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post