ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಾವಿನ್ಯ ಚಿಂತನೆಗಳು ದೇಶದ ಆವಿಷ್ಕಾರಿ ಅಭಿವೃದ್ದಿಯ ಮೂಲ ಬೇರು ಎಂದು ಕೆ.ಪಿ.ಟಿ.ಸಿ.ಎಲ್ ಸಹಾಯಕ ಎಂಜಿನಿಯರ್ ಆರ್. ಸುನೀಲ್ ಅಭಿಪ್ರಾಯಪಟ್ಟರು.
ಇಂದು ಡಿ.ಎಸ್. ದಿನಕರ್ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಐದು ದಿನಗಳ ಕಾಲ ಏರ್ಪಡಿಸಿದ ಇಂಪ್ಲ್ಯಾಂಟ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಆವಿಷ್ಕಾರಿ ಯುಗಕ್ಕೆ ಸನ್ನದ್ದರಾಗಲು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ನಾವಿನ್ಯ ಚಿಂತನೆಗಳನ್ನು ರೂಡಿಸಿಕೊಳ್ಳಬೇಕಿದೆ. ವಿದ್ಯುತ್ ಉತ್ಫಾದನೆಯಲ್ಲಿ ಕೆಪಿಟಿಸಿಎಲ್ ಅನೇಕ ಆವಿಷ್ಕಾರಿ ಯೋಜನೆಗಳನ್ನು ಅಳವಡಿಸಿಕೊಂಡಿದೆ. ಇದರ ಜೊತೆಗೆ ನವೀಕರಿಸಬಹುದಾದ ಇಂಧನ, ಸೊಲಾರ್ ವಾಹನಗಳ ಉತ್ಫಾದನೆ ಮತ್ತು ಬಳಕೆಗೆ ಹೆಚ್ಚು ಪ್ರಾದಾನ್ಯತೆ ನೀಡುತ್ತಿದೆ. ಅಂತಹ ಆವಿಷ್ಕಾರಿ ಯೋಜನೆಗಳಿಗೆ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಪುಸ್ತಕ ಜ್ಞಾನದ ಜೊತೆಗೆ ಬದಲಾಗುತ್ತಿರುವ ಹೊಸತನದ ವಾಸ್ತವತೆಯ ಅರಿವನ್ನು ಪಡೆಯಿರಿ ಎಂದು ಹೇಳಿದರು.
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಅಜಯ್.ಕೆ.ಎಸ್ ಮಾತನಾಡಿ ಬದಲಾಗುತ್ತಿರುವ ಪಠ್ಯಕ್ರಮಗಳು ಕೈಗಾರಿಕೆಗಳ ಅವಶ್ಯಕತೆಗಳಿಗೆ ಪೂರಕವಾಗಿದೆ. ವಾಸ್ತವ ಮತ್ತು ಪುಸ್ತಕದ ಜ್ಞಾನದ ನಡುವಿನ ಅಂತರ ಕಡಿಮೆಗೊಳಿಸಲು ಈ ಕಾರ್ಯಾಗಾರ ರೂಪಿಸಲಾಗಿದ್ದು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಮೂಲ ವಿಚಾರಗಳ ಜೊತೆಗೆ, ಕೈಗಾರಿಕೆಗಳ ಅವಶ್ಯಕತೆಗಳನ್ನು ಅರಿಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್.ಎಸ್ ಮಾತನಾಡಿ ಇಂದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ದೈನಂದಿನವಾಗಿ ಎದುರಾಗುವ ಅನೇಕ ಸವಾಲುಗಳಿಗೆ ವೇಗದ ಪರಿಹಾರ ನೀಡಲು ಸಾಧ್ಯವಾಗುತ್ತಿದೆ. ನಮ್ಮ ಕಲ್ಪನೆಯಲ್ಲಿರುವ ಟ್ರಾನ್ಫಾರ್‍ಮರ್‌ಗಳ ಗಾತ್ರ ಮತ್ತು ಕಾರ್ಯಕ್ಷಮತೆಗು ವಾಸ್ತವ ಕಾರ್ಖಾನೆಗಳಲ್ಲಿ ಬಳಸುತ್ತಿರುವುದಕ್ಕು ಅನೇಕ ವ್ಯತ್ಯಾಸವಿದೆ. ಅಂತಹ ವ್ಯತ್ಯಾಸಗಳ ನಡುವಿನ ಅರಿವು ಪಡೆಯಲು ಕಾರ್ಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವತೆಯನ್ನು ಸಂದರ್ಶಿಸುವುದು ಉತ್ತಮ ಅಭ್ಯಾಸವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್‌ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಉಪನ್ಯಾಸಕರಾದ ರಂಜಿತ್, ಪ್ರಭುದೇವ್, ಚೈತ್ರ, ಮಹಾಲಕ್ಷ್ಮೀ, ರಘು, ಗಿರಿಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post