ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳಿಗೆ ಬಂಡವಾಳ ಹೂಡಿ ಅಭಿವೃದ್ಧಿಗೊಳಿಸಬೇಕು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್. ರಾಜು ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಎರಡೂ ಕಾರ್ಖಾನೆಗಳು ಎರಡು ಕಣ್ಣುಗಳಿದ್ದಂತೆ. ರಾಜಕಾರಣಿಗಳು ಸ್ವಹಿತಾಸಕ್ತಿಗಾಗಿ ಈ ಕಾರ್ಖಾನೆಗಳನ್ನು ಸಂಪೂರ್ಣವಾಗಿ ಮುಚ್ಚಲು ಹೊರಟಿದ್ದಾರೆ. ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ. ಕಳೆದ 8 ವರ್ಷಗಳಿಂದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರುಗಳು ಈ ಎರಡೂ ಕಾರ್ಖಾನೆಗಳನ್ನು ಉಳೀಸುತ್ತೇವೆ ಎಂದು ಆಣೆ ಮಾಡಿದ್ದರು. ಆದರೆ ಇದೀಗ ಅದು ಸುಳ್ಳಾಗಿದೆ ಎಂದು ಆರೋಪಿಸಿದರು.
ಕಾರ್ಖಾನೆಯ ಕಾರ್ಮಿಕರು ಕಾರ್ಖಾನೆ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಎಲ್ಲಾ ಪಕ್ಷದ ಮುಖಂಡರು ಮಾಜಿ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಭದ್ರಾವತಿ ಕ್ಷೇತ್ರದ ಶಾಸಕರು ಕಾರ್ಖಾನೆ ಉಳಿಸುವ ಬಗೆ ಮಾತನಾಡುತ್ತಿದ್ದಾರಷ್ಟೆ. ಕಾರ್ಮಿಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬಂದು ಮಾತು ಕೊಡುತ್ತಿದ್ದಾರೆ. ಈಗ ರಾಜ್ಯದ ಎಲ್ಲಾ ಶಾಸಕರು ಮಲೆನಾಡು ಭಾಗದ ಶಾಸಕರೊಂದಿಗೆ ಸೇರಿಕೊಂಡು ವಿಧಾನಸಭೆ ಕಲಾಪದಲ್ಲಿ ಈ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ತೀರ್ಮಾನ ತೆಗದುಕೊಂಡ ಕಾರ್ಖಾನೆಗಳನ್ನು ಉಳಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಬೇಕು ಎಂದು ಆಗ್ರಹಿಸಿದರು.
Also read: ಫೆ.15, 16 ಮಹಾಲಿಂಗಪ್ಪ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಕಾರ್ಖಾನೆಯ ಉಳಿವಿಗಾಗಿ ಫೆ.27ರಂದು ನಮ್ಮ ಹೋರಾಟ ಸಮಿತಿಯು ಭದ್ರಾವತಿ ತಾಲೂಕು ಕಚೇರಿ ಮುಂಭಾಗದಿಂದ ಶಿವಮೊಗ್ಗದ ಸೋಗಾನೆಯ ವಿಮಾನ ನಿಲ್ದಾಣದವರೆಗೂ ನ್ಯಾಯಕ್ಕಾಗಿ ಪಾದಯಾತ್ರೆ ಮಾಡುತ್ತೇವೆ. ನಮ್ಮದು ಪ್ರತಿಭಟನೆಯಲ್ಲ. ಶಾಂತಿಯುತ ಮನವಿ. ನಾವು ಯಾವಾಗಲೂ ಸಂವಿಧಾನಬದ್ಧವಾಗಿಯೇ ಹೋರಾಟ ಮಾಡುತ್ತಿದ್ದೇವೆ. ಅಂದು ಬಹುಶಃ ಪ್ರಧಾನ ಮಂತ್ರಿಗಳು ಬರಬಹುದು. ನಮಗೆ ಪಾದಯಾತ್ರೆ ಮಾಡಲು ಪೊಲೀಸರು ಅವಕಾಶ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾರ್ಖಾನೆ ಕಾರ್ಮಿಕರ ಜೊತೆ ನಾವಿರುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ರಹ್ಮಲಿಂಗಯ್ಯ, ಶ್ರೀನಿವಾಸ್, ವೀರೇಶ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















