ಸಾಮಾಜಿಕ ಜಾಲತಾಣಗಳು ಆರಂಭವಾದ ಮೇಲೆ ಮಕ್ಕಳು ವ್ಯಸನಿಗಳಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಎಚ್ಚರವಹಿಸಬೇಕಾದ ಅವಶ್ಯತೆ ಇದೆ ಎಂದು ಐಪಿಎಸ್ ಅಧಿಕಾರಿ ಹಾಗೂ ವಿನೋಬನಗರ ಠಾಣೆಯ ಎಎಸ್‍ಪಿ ಬಿಂದುಮಣಿ ಹೇಳಿದರು.
ಅವರು ಇಂದು ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವರಕ್ಷಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ಮಾಡುತ್ತಲೇ ಮಾತನಾಡಿದ ಅವರು, ಇತ್ತೀಚೆಗೆ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಇದರಿಂದ ಹೊರಬರಲು ಪೋಷಕರು ಮತ್ತು ಶಿಕ್ಷಕರು ಪ್ರಯತ್ನಿಸಬೇಕಾಗಿದೆ. ಮಕ್ಕಳ ಚಟುವಟಿಕೆಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದರು.
Also read: ನೂತನ ಅಂಗನವಾಡಿ ಕೇಂದ್ರಕ್ಕೆ ಶಾಸಕ ಚೆನ್ನಬಸಪ್ಪ ಚಾಲನೆ
ಮೊಬೈಲ್ ಹೆಚ್ಚು ಬಳಸುವುದರಿಂದ ಮೆದುಳಿನ ಸಾಮರ್ಥ್ಯ ಕಡಿಮೆಯಾಗುತ್ತದೆ ಕಣ್ಣುಗಳಿಗೆ ತೊಂದರೆಯಾಗುತ್ತದೆ. ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅನವಶ್ಯಕವಾಗಿ ಬೆಟ್ಟಿಂಗ್‍ನಂತಹ ಜೂಜಾಟಕ್ಕೂ ಒಳಗಾಗಿ ಬದುಕನ್ನೇ ನಾಶ ಮಾಡಿಕೊಳ್ಳುತ್ತೀರಿ ಎಂದರು.
ತಂದೆ-ತಾಯಿಗಳಿಗೆ ಗೌರವ ಕೊಡಿ. ಎದುರು ಮಾತನಾಡಬೇಡಿ. ನಿಮ್ಮ ಓದಿನ ಕಡೆ ಗಮನಹರಿಸಿ. ತಂದೆತಾಯಿಗಳ ಕಷ್ಟಗಳನ್ನು ಅರಿತುಕೊಳ್ಳಿ. ಸಮಾಜದಲ್ಲಿ ಒಳ್ಳೆಯವರಾಗಿ ಬಾಳಿ. ತರಗತಿಗಳಿಗೆ ಗೈರುಹಾಜರಾಗಬೇಡಿ. ರಾತ್ರಿ ಹೊತ್ತು ಒಬ್ಬರೇ ಓಡಾಡಬೇಡಿ. ಅಕಸ್ಮಾತ್ ತೊಂದರೆಯ ಸನ್ನಿವೇಶವಿದ್ದಾಗ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ತಿಳಿ ಹೇಳಿದರು.
ಪ್ರಾಂಶುಪಾಲೆ ಸುನೀತಾದೇವಿ ಮಾತನಾಡಿ, ಬಹಳ ಮಕ್ಕಳು ಮೊಬೈಲ್ ಕೊಡದಿದ್ದರೆ ಊಟ ಬಿಡುವುದು, ಮನೆ ಬಿಟ್ಟು ಹೋಗುವುದು, ಬೆದರಿಕೆ ಹಾಕುವುದು, ಎದುರು ಉತ್ತರ ಕೊಡುವುದು ಮಾಡುತ್ತಿದ್ದಾರೆ. ಅನೇಕ ಪೋಷಕರು ಈ ಬಗ್ಗೆ ತಮಗೆ ದೂರು ನೀಡಿದ್ದಾರೆ. ಎಲ್ಲರೂ ಮೊಬೈಲ್‍ಗಳನ್ನು ಅಗತ್ಯ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಉಪಯೋಗಿಸಿ ಎಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರದೀಪ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post