Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಾಂಧವ್ಯಗಳು ಕಳೆದು ಹೋಗುತ್ತಿರುವ ದಿನಗಳಲ್ಲಿ ಸ್ವಲ್ಪವಾದರೂ ಮರುಕಳಿಸಿ ನೆನಪಿನಲ್ಲಿಡುವ ಕಾರ್ಯಗಳು ಆಗಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಶನಿವಾರ ನಗರದ ಎಸ್.ಆರ್. ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾಂತ್ರಿಕ ಜೀವನದೊಳಗೆ ಸಿಲುಕಿ ನಮ್ಮ ಸಂಸ್ಕೃತಿ ಸಂಭ್ರಮಗಳು ಮರೆಯಾಗುತ್ತಿರುವ ಕಾಲಮಾನದಲ್ಲಿ ನಾವಿದ್ದೇವೆ. ಉಭಯ ಕುಶಲೋಪಚರಿ ಒಕ್ಕಣೆಯ ಪತ್ರಗಳು ಮರೆಯಾಗುತ್ತಿದೆ. ಔಪಚಾರಿಕದ ಕರೆಯೋಲೆಗಳು ಪೋನಿನ ಮೂಲಕ ಸಿಗ್ಗುತ್ತಿದೆ. ಅಂತಹ ಕರೆಯೋಲೆಯ ಕಾರ್ಯಕ್ರಮ ಕೇವಲ ಆಡಂಬರದಿಂದ ಕೂಡಿರುತ್ತದೆಯೆ ವಿನಃ ಸಂಭ್ರಮದಿಂದಲ್ಲ.
ಮೊದಲೆಲ್ಲ ಪತ್ರಗಳ ಮೂಲಕ ಆಹ್ವಾನ ನೀಡಲಾಗುತ್ತಿತ್ತು. ಅಂತಹ ಪತ್ರಗಳನ್ನು ಹಳ್ಳಿಯ ಮನೆಗಳಲ್ಲಿ ವರ್ಷಾನುಗಟ್ಟಲೆ ಜೋಪಾನ ಮಾಡಲಾಗುತ್ತಿತ್ತು. ಅಂತಹ ಸಂಭ್ರಮಯುತ ದಿನಗಳು ಕಣ್ಮೆರೆಯಾಗಿದೆ. ಸುಗ್ಗಿ ಕಾಲದಲ್ಲಿ ನಡೆಯುತ್ತಿದ್ದ ಒಕ್ಕಲಾಟ, ರಾಶಿ ಪೂಜೆಗಳು ಮರೆಯಾಗಿ, ಭತ್ತ ಕಟಾವಿನ ಯಂತ್ರಗಳಿಂದ ಯಾಂತ್ರಿಕೃತವಾಗಿಯೇ ಹಂಚಿಕೆಯಾಗಿ ಹೋಗುತ್ತಿದೆ. ನಮ್ಮ ಮುಂದಿನ ತಲೆಮಾರುಗಳು ಇಂತಹ ಸಂಭ್ರಮಗಳಿಂದ ವಂಚಿತರಾಗದಿರಲು ಕಾಲೇಜುಗಳಲ್ಲಿ ಆಯೋಜಿಸುವ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ.
ಇಂದಿನ ದಿನಮಾನ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆಲ್ಲ ಕೃಷಿಯ ಕೆಲಸಗಳನ್ನು ಮಾಡಲು ಕೀಳರಿಮೆಯೆಂದು ಭಾವನೆ ಹೆಚ್ಚಾಗುತ್ತಿದೆ. ಸಂಘಟಿತ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸವಾಲುಗಳ ನಡುವೆ ನಮ್ಮ ಭಾರತೀಯ ಸನಾತನ ಸಂಸ್ಕೃತಿ ಸದಾಚಾರಗಳಿಂದ ವಿಮುಖರಾಗಲು ಆಲೋಚಿಸಿದೆ, ಉಳಿಸಿಕೊಂಡು ಮುನ್ನಡೆಯುವ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಜರಿದ್ದರು.
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು ಹಬ್ಬಕ್ಕೆ ತಕ್ಕಂತೆ ಕಬ್ಬುಗಳನ್ನು ಜೋಡಿಸಿ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ಬಾಳೆ ಎಲೆಗಳಿಂದಲೇ ನಿರ್ಮಿಸಿದ್ದ ಫೋಟೋ ಸ್ಟಾಂಡ್ ನಲ್ಲಿ ಪೋಟೊ ತೆಗೆಸಿಕೊಂಡು ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post