ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾತಕಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಗಾಂಧಿಬಜಾರಿನ ಜೈನ ಸಮಾಜ ಬಾಂಧವರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಭೆ ನಡೆಸಿ ನಂತರ ಮನವಿ ಸಲ್ಲಿಸಿದರು.
ಅಹಿಂಸೆಗೆ ಹೆಸರಾಗಿದ್ದ ನಂದಿಮಹಾರಾಜರನ್ನು ಕಿಡಿಗೇಡಿಗಳು ಅಪಹರಿಸಿ ಅವರ ದೇಹವನ್ನು 9 ತುಂಡುತುಂಡಾಗಿ ಅಮಾನುಷವಾಗಿ ಕತ್ತರಿಸಿ ಕೊಳವೆ ಬಾವಿಗೆ ಎಸೆದಿದ್ದು ಅತ್ಯಂತ ಹೀನ ಕೃತ್ಯವಾಗಿದೆ. ನಂದಿ ಮಹಾರಾಜರು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದವರು. ಅಹಿಂಸೆಯೇ ಪರಮಧರ್ಮ ಎಂದುಕೊಂಡವರು. ಇಂತಹ ಮುನಿಗಳನ್ನು ಹತ್ಯೆ ಮಾಡಿದ್ದು, ಅತ್ಯಂತ ಅಮಾನುಷವಾಗಿದೆ. ಈ ಘೋರ ಕೃತ್ಯದ ಹಿಂದೆ ಅನೇಕರ ಕೈವಾಡವಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ಜೈನಾಚಾರ್ಯರ, ಮುನಿ ಮಹಾರಾಜರ ರಕ್ಷಣೆಯನ್ನು ರಾಜ್ಯಸರ್ಕಾರವೇ ವಹಿಸಿ ರಕ್ಷಣೆ ನೀಡಬೇಕು. ಜೈನಾಚಾರ್ಯರು ತಂಗುವ ಎಲ್ಲಾ ಶಾಲಾ ಕಾಲೇಜುಗಳಿಗೆ ರಕ್ಷಣೆ ನೀಡಬೇಕು. ಈ ಕೃತ್ಯವನ್ನು ಸಿಬಿಐಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
Also read: ಆ.5, 6ರಂದು ಶಿವಮೊಗ್ಗ ಓಪನ್ ನಾಲ್ಕನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿ
ಪ್ರತಿಭಟನೆಯಲ್ಲಿ ಪ್ರಮುಖರಾದ ದೇವಿಚಂದ್ ಜೈನ್, ಚಂದನ್‍ಮಲ್ ಜೈನ್, ಮೋಹನ್‍ಲಾಲ್ ಜೈನ್, ಪ್ರಭಾಕರ ಗೋಗಿ, ಪಿಕೆ. ಜೈನ್, ಧರಣೇಂದ್ರ ದಿನಕರ್, ಎಸ್.ದತ್ತಾತ್ರಿ, ರಮೇಶ್‍ಬಾಬು, ವಾಸುದೇವ್, ಸುರೇಖಾ ಮುರಳೀಧರ್ ಸೇರಿದಂತೆ ಹಲವರು ಇದ್ದರು.
ಸಿಬಿಐ ತನಿಖೆಗೆ ಕೆ.ಎಸ್.ಈಶ್ವರಪ್ಪ ಆಗ್ರಹ
ಜೈನ ಮುನಿಗಳ ಹತ್ಯೆ ಅತ್ಯಂತ ಅಮಾನುಷವಾಗಿದ್ದು, ಇಡೀ ಪ್ರಪಂಚವೇ ತಲೆತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರ ತನಿಖೆ ಮಾಡುವುದಾಗಿ ತಿಳಿಸಿದೆ. ಇದನ್ನು ಸ್ವಾಗತಿಸುತ್ತೇವೆ. ಆದರೆ ಇದರ ಜೊತೆಗೆ ಸಿಬಿಐ ತನಿಖೆಯನ್ನು ಕೂಡ ಮಾಡಬೇಕು ಇದರಿಂದ ನೊಂದ ಜೈನ ಬಾಂಧವರಿಗೆ ಸಮಾಧಾನವಾಗುತ್ತದೆ ಎಂದರು.
ಇವರ ಕೊಲೆ ಏಕಾಯಿತು ಎಂಬ ಬಗ್ಗೆಯೇ ವಿವಾದವಿದೆ. ರಾಜ್ಯಸರ್ಕಾರ ಏನೋ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದೆ ಆದರೆ ಇಷ್ಟು ಸಾಲದು. ಇದರ ಹಿಂದೆ ಮತ್ತಷ್ಟು ಶಕ್ತಿಗಳು ಇವೆ. ಅವೆಲ್ಲ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕು. ಹಾಗೂ ಹಿಂದುಗಳ ಹತ್ಯೆ ಮುಂದುವರಿಯುತ್ತಿದ್ದು ಈ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















